ನವದೆಹಲಿ: ಭೂಸ್ವಾಧೀನ ಸುಗ್ರೀವಾಜ್ಞೆಗೆ ಸಂಬಂಧಿಸಿ ಬಿಜೆಪಿ-ಕಾಂಗ್ರೆಸ್ ನಡುವಿನ ವಾಕ್ಸಮರ ಮುಂದುವರಿದಿದೆ. ಜನರಿಗೆ ಕಾಂಗ್ರೆಸ್ ತಪ್ಪು ಮಾಹಿತಿ ರವಾನಿಸುತ್ತಿದೆ ಎಂದು ಆರೋಪಿಸಿರುವ ಸಂಸದೀಯ ವ್ಯವಹಾರಗಳ ಸಚಿವ ವೆಂಕಯ್ಯ ನಾಯ್ಡು, ಕಾಂಗ್ರೆಸ್ ಅನ್ನು `ದೆವ್ವ'ಕ್ಕೆ ಹೋಲಿಸಿದ್ದಾರೆ.
ಮಂಗಳವಾರ ಮಾತನಾಡಿದ ನಾಯ್ಡು, ಸುಗ್ರೀವಾಜ್ಞೆ ಹೊರಡಿಸಿರುವುದನ್ನು ಕಾಂಗ್ರೆಸ್ ಖಂಡಿಸುತ್ತಿರುವುದು `ದೆವ್ವ ಧರ್ಮ ಗ್ರಂಥ ಉದ್ಧರಿಸಿದಂತಾಗಿದೆ'. ಕಾಂಗ್ರೆಸ್ 50 ವರ್ಷಗಳಲ್ಲಿ 456 ಸುಗ್ರೀವಾಜ್ಞೆಗಳನ್ನು ಹೊರಡಿಸಿದೆ. ಹಾಗಾಗಿ ಕಾಂಗ್ರೆಸ್‍ಗೆ ನಮ್ಮ ಸುಗ್ರೀವಾಜ್ಞೆಯನ್ನು `ಪ್ರಜಾಪ್ರಭುತ್ವದ ಕಗ್ಗೊಲೆ' ಎಂದು ಬಣ್ಣಿಸುವ ನೈತಿಕ ಹಕ್ಕಿಲ್ಲ ಎಂದಿದ್ದಾರೆ.
ಇದೇ ವೇಳೆ, ಏನೇ ಆದರೂ ಸುಗ್ರೀವಾಜ್ಞೆಯನ್ನು ಸಮರ್ಥಿಸಿಕೊಳ್ಳಿ ಎಂದು ತನ್ನ ಎಲ್ಲ ಸಂಸದರಿಗೆ ಬಿಜೆಪಿ ಆದೇಶಿಸಿದೆ. ಮಂಗಳವಾರ ನಡೆದ ಬಿಜೆಪಿ ಸಂಸದೀಯ ಮಂಡಳಿ ಸಭೆಯಲ್ಲಿ ಸಂಸದರಿಗೆ ಈ ರೀತಿ ಸೂಚಿಸಿರುವ ಪಕ್ಷ, ಈ ವೇಳೆ ಗುಜರಾತ್ ಮಾದರಿಯನ್ನು ಪ್ರಸ್ತಾಪಿಸಿ ಎಂದೂ ಹೇಳಿದೆ.