ಲಖನೌ: ವಾರದಲ್ಲಿ ಎರಡು ಬಾರಿ ಲಖನೌನಿಂದ ದೆಹಲಿಗೆ ಸಂಚರಿಸಲಿರುವ `ಹವಾನಿಯಂತ್ರಕ ಡಬಲ್ ಡೆಕ್ಕರ್ ಎಕ್ಸ್‌ಪ್ರೆಸ್` ರೈಲಿಗೆ ಕೇಂದ್ರ ಸಚಿವ ರಾಜನಾಥ್ ಸಿಂಗ್ ಅವರು ಚಾಲನೆ ನೀಡಿದ್ದಾರೆ.
ಈ ನೂತನ ಎಸಿ ಡಬಲ್ ಡೆಕ್ಕರ್ ಎಕ್ಸ್‌ಪ್ರೆಸ್ ಮೇ 1 ರಿಂದ ಸಂಚಾರ ಆರಂಭಗೊಳ್ಳಲಿದ್ದು, ಪ್ರತಿ ಶುಕ್ರವಾರ, ಭಾನುವಾರ ಲಖನೌದಿಂದ ದೆಹಲಿ ಮಧ್ಯೆ ಚಲಿಸಲಿದೆ.
ಭಾನುವಾರ ಆನಂದ್ ವಿಹಾರ್ ಟರ್ಮಿನಲ್‌ನಲ್ಲಿ ಎಸಿ ಹವಾನಿಯಂತ್ರಕ ಡಬಲ್ ಡೆಕ್ಕರ್‌ಗೆ ಚಾಲನೆ ನೀಡಿದ ಬಳಿಕ ಮಾತನಾಡಿದ ರಾಜನಾಥ್ ಸಿಂಗ್ ಅವರು ರೈಲ್ವೆ ಸಚಿವರು ಪ್ರತಿನಿತ್ಯ ಡಬಲ್ ಡೆಕ್ಕರ್ ಚಲಿಸುವಂತೆ ಸೌಲಭ್ಯ ಕಲ್ಪಿಸಬೇಕೆಂದು ಮನವಿ ಮಾಡಿದರು.
12584/12583 ಸಂಖ್ಯೆಯ ರೈಲು ಅನಂದ್ ವಿಹಾರ್ ಟರ್ಮಿನಲ್‌ನಿಂದ ಲಖನೌವರೆಗೂ ಚಲಿಸಲಿದ್ದು, 12584 ಸಂಖ್ಯೆ ರೈಲು ಮಧ್ಯಾಹ್ನ 2.10ಕ್ಕೆ ಆನಂದ್ ವಿಹಾರ್ ಟರ್ಮಿನಲ್ ಬಿಟ್ಟು ರಾತ್ರಿ 10.50ಕ್ಕೆ ಲಖನೌ ತಲುಪಲಿದೆ. ಮಾರನೆ ದಿನ ಬೆಳ್ಳಂಬೆಳಿಗ್ಗೆ 5ಕ್ಕೆ 12583 ಸಂಖ್ಯೆಯ ರೈಲು ಲಖನೌ ಬಿಟ್ಟು ಮಧ್ಯಾಹ್ನ 1ಕ್ಕೆ ಆನಂದ್ ವಿಹಾರ್ ಟರ್ಮಿನಲ್ ತಲುಪಲಿದೆ.