ದೇಶ

'ಸ್ಕ್ಯಾಮ್ ಟು ಸ್ಕಿಲ್ ಇಂಡಿಯಾ' ಪ್ರಧಾನಿ ಹೇಳಿಕೆ ಸಮರ್ಥಿಸಿಕೊಂಡ ಜೇಟ್ಲಿ

Lingaraj Badiger

ನವದೆಹಲಿ: ಕೆನಡಾ ಪ್ರವಾಸದ ವೇಳೆ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ನೀಡಿದ್ದ 'ಸ್ಕ್ಯಾಮ್ ಟು ಸ್ಕಿಲ್ ಇಂಡಿಯಾ' ಹೇಳಿಕೆ ಮಂಗಳವಾರ ರಾಜ್ಯಸಭೆಯಲ್ಲಿ ತೀವ್ರ ಕೋಲಾಹಲ ಸೃಷ್ಟಿಸಿತು.

ಪ್ರಧಾನಿ ಹೇಳಿಕೆ ವಿರುದ್ಧ ವಾಗ್ದಾಳಿ ನಡೆಸಿದ ಕಾಂಗ್ರೆಸ್ ನಾಯಕ ಅನಂದ್ ಶರ್ಮಾ, ಟೊರಾಂಟೊದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಭಾರತದ ಮಾನ ಹರಾಜು ಹಾಕಿದ್ದಾರೆ. ಮೋದಿ ಹಿಂದಿ ಪ್ರಧಾನಿಗಳಾದ ನೆಹರೂ ಹಾಗೂ ವಾಜಪೇಯಿ ಸೇರಿದಂತೆ ಎಲ್ಲರಿಗೂ ಅಪಮಾನ ಮಾಡಿದ್ದಾರೆ ಎಂದು ಆರೋಪಿಸಿದರು.

ಪ್ರಧಾನಿ ಹೇಳಿಕೆಯನ್ನು ಬಲವಾಗಿ ಸಮರ್ಥಿಸಿಕೊಂಡ ವಿತ್ತ ಸಚಿವ ಅರುಣ್ ಜೇಟ್ಲಿ ಅವರು, ಅವರು ಕಳೆ 60 ವರ್ಷಗಳಲ್ಲಿ ಭಾರತ ಇದ್ದ ಪರಿಸ್ಥಿತಿಯನ್ನು ವಿವರಿಸಿದ್ದಾರೆ. ಇದ್ದದ್ದನ್ನು ಇದ್ದ ಹಾಗೆಯೇ ಹೇಳಿದರೆ ನಿಮಗೆ ಏಕೆ ಕೋಪ ಎಂದು ತಿರುಗೇಟು ನೀಡಿದರು.

ಯುಪಿಎ ಸರ್ಕಾರದಲ್ಲಿ ಸ್ಕ್ಯಾಮ್ ನಡೆದೇ ಇಲ್ಲವೇ ಎಂದು ಪ್ರಶ್ನಿಸಿದ ಜೇಟ್ಲಿ, ಅದಕ್ಕಾಗಿ ಪ್ರಧಾನಿ ಮೋದಿ ಸ್ಕ್ಯಾಮ್ ಇಂಡಿಯಾ ಕಳಂಕ ತೊಳೆದು ಸ್ಕಿಲ್ ಇಂಡಿಯಾ ಮಾಡುವುದಾಗಿ ಸರಿಯಾದ ಹೇಳಿಕೆಯನ್ನೇ ನೀಡಿದ್ದಾರೆ ಎಂದರು. ಜೇಟ್ಲಿ ಹೇಳಿಕೆಗೂ ಕಾಂಗ್ರೆಸ್ ಹಾಗೂ ಉಳಿದ ವಿಪಕ್ಷಗಳು ತೀವ್ರ ಗದ್ದಲ, ಕೋಲಾಹಲ ಸೃಷ್ಟಿಸಿದವು. ಇದರಿಂದಾಗಿ ಸಭಾಪತಿ 2 ಬಾರಿ ಕಲಾಪವನ್ನು ಮುಂದೂಡಿದರು.

SCROLL FOR NEXT