ದೇಶ

ಜಯಾ ಅಕ್ರಮ ಆಸ್ತಿ ಗಳಿಕೆ ಪ್ರಕರಣ: ವಿಶೇಷ ಅಭಿಯೋಜಕರಾಗಿ ಬಿ.ವಿ ಆಚಾರ್ಯ ನೇಮಕ

Srinivasamurthy VN

ಬೆಂಗಳೂರು: ತಮಿಳುನಾಡು ಮಾಜಿ ಮುಖ್ಯಮಂತ್ರಿ ಜಯಲಲಿತಾ ಅವರ ಅಕ್ರಮ ಆಸ್ತಿಗಳಿಕೆ ಪ್ರಕರಣದಲ್ಲಿ ಸರ್ಕಾರ ವಿಶೇಷ ಅಭಿಯೋಜಕ ಸ್ಥಾನದಿಂದ ಭವಾನಿ ಸಿಂಗ್ ಅವರನ್ನು ಬದಲಾವಣೆ ಮಾಡಲಾಗಿದ್ದು, ಅವರ ಸ್ಥಾನಕ್ಕೆ ಹಿರಿಯ ನ್ಯಾಯವಾದಿ ಬಿವಿ ಆಚಾರ್ಯ ಅವರನ್ನು ನೇಮಕ ಮಾಡಲಾಗಿದೆ.

ಈ ಹಿಂದೆ ಭವಾನಿ ಸಿಂಗ್​​​  ಅವರ ನೇಮಕ ವಿಚಾರಕ್ಕೆ ಸಂಬಂಧಿಸಿದಂತೆ ವಿಚಾರಣೆ ನಡೆಸಿದ್ದ ಸುಪ್ರೀಂ ಕೋರ್ಟ್, ಸಿಂಗ್ ನೇಮಕ ಕಾನೂನು ಬಾಹಿರ ಎಂದು ತೀರ್ಪು ನೀಡಿತ್ತು. ಈ ಹಿನ್ನೆಲೆಯಲ್ಲಿ ಅವರ ಸ್ಥಾನಕ್ಕೆ ಬಿವಿ ಆಚಾರ್ಯ ಅವರನ್ನು ನೇಮಕ ಮಾಡಲಾಗಿದೆ ಎಂದು ತಿಳಿದುಬಂದಿದೆ.

ಈ ಹಿಂದೆ ಭವಾನಿ ಸಿಂಗ್‌ ಅವರನ್ನು ವಿಶೇಷ ಸರ್ಕಾರಿ ಅಭಿಯೋಜಕರಾಗಿ ನೇಮಿಸಿದ್ದನ್ನು ಪ್ರಶ್ನಿಸಿ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ್ದ ಸುಪ್ರೀಂ ಕೋರ್ಟ್‌ನ ದ್ವಿಸದಸ್ಯ ಪೀಠವು ಕಳೆದ ಏಪ್ರಿಲ್ 15ರಂದು ಭವಾನಿ ಸಿಂಗ್‌ ನೇಮಕದ ಬಗ್ಗೆ ತನ್ನ ತೀರ್ಪು ಪ್ರಕಟಿಸಿತ್ತು. ಜಯಲಲಿತಾ ಮತ್ತು ಅವರ ಮೂವರು ಆಪ್ತರ ಮೇಲಿನ ಪ್ರಕರಣದಲ್ಲಿ ಕರ್ನಾಟಕ ಸರ್ಕಾರಕ್ಕೆ ಮಾತ್ರ ಪ್ರಾಸಿಕ್ಯೂಷನ್‌ಗೆ ಅಧಿಕಾರವಿದೆ. ಆದರೆ ಇದರಲ್ಲಿ ತಮಿಳುನಾಡು ಸರ್ಕಾರ ಮೂಗು ತೂರಿಸಿರುವುದು ಸರಿಯಲ್ಲ. ಪ್ರಕರಣದ ವಿಚಾರಣೆ ನಡೆಸುತ್ತಿರುವ ನ್ಯಾಯ ಪೀಠಕ್ಕೆ ಕರ್ನಾಟಕ ಏ.28ರೊಳಗೆ ಲಿಖಿತ ದಾಖಲೆ ಸಲ್ಲಿಸಬೇಕು. ಆದರೆ ವಿಚಾರಣೆಯನ್ನು ಹೊಸದಾಗಿ ನಡೆಸುವ ಅಗತ್ಯವಿಲ್ಲ ಎಂದು ಸುಪ್ರೀಂ ಕೋರ್ಟ್‌ ಹೇಳಿತ್ತು.

SCROLL FOR NEXT