ಕಾಸರಗೋಡು: ನೇಪಾಳದ ಭೂಕಂಪದಲ್ಲಿ ಕಾಸರಗೋಡಿನ ಇಬ್ಬರು ವ್ಯಕ್ತಿಗಳು ಸಾವನ್ನಪ್ಪಿದ್ದಾರೆ ಎಂದು ಮೂಲಗಳಿಂದ ತಿಳಿದು ಬಂದಿದೆ.
ನೇಪಾಳದಲ್ಲಿ ಸಂಭವಿಸಿದ ಭೂಕಂಪದ ಬಳಿಕ ಕಾಸರಗೋಡಿನ ಇಬ್ಬರು ವ್ಯಕ್ತಿಗಳು ನಾಪತ್ತೆಯಾಗಿದ್ದಾರೆ ಎಂದು ಹೇಳಲಾಗಿತ್ತು. ಈಗ ಅವರು ಮೃತಪಟ್ಟಿರುವುದಾಗಿ ದೃಢಪಟ್ಟಿದೆ.
ಕಾಸರಗೋಡಿನ ಡಾ.ಇರ್ಷಾದ್( 23) ಮತ್ತು ಕಣ್ಣೂರಿನ ಡಾ. ದೀಪಕ್(23) ಎಂಬವರು ಮೃತಪಟ್ಟಿದ್ದಾರೆ.
ಅವರ ಮೃತದೇಹಗಳನ್ನು ಕಠ್ಮ್ಮಂಡುವಿನ ತಾಚಿಂಗ್ ಆಸ್ಪತ್ರೆಯ ಶವಾಗಾರದಲ್ಲಿರಿಸಲಾಗಿದ್ದು, ಸಂಬಂಧಿಕರು ಗುರುತು ಪತ್ತೆ ಹಚ್ಚಿದ್ದಾರೆ. ಕಠ್ಮಂಡುವಿಗೆ ತೆರಳಿದ್ದ ಇರ್ಷಾದ್‌ರ ಸಹೋದರ ಲಿಯಾಖತ್ ಹಾಗೂ ದೀಪಕ್‌ರ ಸಂಬಂಧಿಕರು ಮೃತದೇಹಗಳ ಗುರುತು ಪತ್ತೆ ಹಚ್ಚಿದ್ದಾರೆ.
ಇಬ್ಬರ ಬಳಿ ಇದ್ದ ಗುರುತು ಚೀಟಿಗಳ ಸಹಾಯದಿಂದ ಗುರುತು ಪತ್ತೆ ಹಚ್ಚಲು ಸಾಧ್ಯವಾಯಿತು.
ದುಬೈಯಲ್ಲಿದ್ದ ಲಿಯಾಖತ್ ಕಠ್ಮಂಡುವಿಗೆ ತೆರಳಿ ಅಲ್ಲಿನ ಆಸ್ಪತ್ರೆಗಳಿಗೆ ಭೇಟಿ ನೀಡಿ ವಿಚಾರಿಸಿದ್ದರು. ಈ ನಡುವೆ ಇಂದು ಸಂಜೆ ತಾಚಿಂಗ್ ಆಸ್ಪತ್ರೆಯ ಶವಾಗಾರದಲ್ಲಿನ ಮೃತದೇಹಗಳನ್ನು ಪರಿಶೀಲಿಸಿದಾಗ ಇರ್ಷಾದ್ ಮತ್ತು ದೀಪಕ್‌ರ ಮೃತ ದೇಹಗಳು ಪತ್ತೆಯಾಗಿವೆ.
ವೈದ್ಯರಾದ ಡಾ.ಇರ್ಶಾದ್ ಮತ್ತು ಕಣ್ಣೂರಿನ ಡಾ.ದೀಪಕ್ ಪ್ರವಸಾಕ್ಕೆಂದು ಬುಧವಾರದಂದು ದೆಹಲಿಯಿಂದ ಕಠ್ಮಂಡುವಿಗೆ ತೆರಳಿದ್ದರು. ಆದರೆ ಅಲ್ಲಿ ಸಂಭವಿಸಿದ ಭೂಕಂಪಕ್ಕೆ ಈ ಇಬ್ಬರು ವೈದ್ಯರು ಬಲಿಯಾಗಿದ್ದಾರೆ.
ಮೃತದೇಹಗಳನ್ನು ಊರಿಗೆ ತರುವ ಸಿದ್ಧ್ದತೆ ನಡೆಯುತ್ತಿದೆ. ನಾಳೆ ಅಥವಾ ನಾಡಿದ್ದು ಮೃತದೇಹಗಳನ್ನು ಮನೆಗೆ ತರುವ ಸಾಧ್ಯತೆ ಇದೆ ಎಂದು ಕುಟುಂಬ ಮೂಲಗಳು ತಿಳಿಸಿವೆ.
ವೈದ್ಯ ಇರ್ಷಾದ್‌ಗೆ ನಿಶ್ಚಿತಾರ್ಥವಾಗಿತ್ತು
ಎರಡು ತಿಂಗಳು ಕಳೆದಿದ್ದರೆ ಇರ್ಷಾದ್ ದಾಂಪತ್ಯ ಜೀವನಕ್ಕೆ ಕಾಲಿಡುತ್ತಿದ್ದರು. ಜುಲೈಯಲ್ಲಿ ವಿವಾಹ ನಿಶ್ಚಯವಾಗಿತ್ತು. ವಿವಾಹಕ್ಕಾಗಿ ಸಿದ್ಧತೆ ನಡೆಯುತ್ತಿತ್ತು. ಇರ್ಷಾದ್‌ರ ಮನೆಗೆ ಬಣ್ಣ ಬಳಿಯುವ ಕೆಲಸವು ನಡೆಯುತ್ತಿತ್ತು.
ಆದರೆ ಅಷ್ಟರಲ್ಲೇ ನೇಪಾಳದ ಮಹಾಭೂಕಂಪದಲ್ಲಿ ತಮ್ಮ ಪ್ರಾಣ ಕಳೆದುಕೊಂಡಿದ್ದಾರೆ. ಎಂಬಿಬಿಎಸ್ ಬಳಿಕ ಎಂಡಿ ವ್ಯಾಸಂಗಕ್ಕಾಗಿ ಅಸ್ಸಾಂಗೆ ತೆರಳಿದ್ದರು. ಶಿಕ್ಷಣ ಪಡೆದ ಬಳಿಕ ಸ್ನೇಹಿತರ ಜೊತೆ ನೇಪಾಳಕ್ಕೆ ಪ್ರವಾಸ ಹೊರಟಿದ್ದರು. ಶನಿವಾರ ಬೆಳಗ್ಗೆ ಇರ್ಷಾದ್ ಊರಲ್ಲಿರುವ ಸ್ನೇಹಿತರಿಗೆ ಕರೆ ಮಾಡಿ ಮಾತನಾಡಿದ್ದರು. ಭೂಕಂಪ ಸಂಭವಿಸಿದ ನಂತರ ಅವರ ಸಂಪರ್ಕ ಕಡಿತಗೊಂಡಿತ್ತು.