ದೇಶ

ಮದುವೆ ಪವಿತ್ರ ಹೌದು ಆದರೆ ವೈವಾಹಿಕ ಅತ್ಯಾಚಾರ ಪವಿತ್ರವಲ್ಲ: ಖುಷ್ಬೂ

ನವದಹೆಲಿ: ಭಾರತದಲ್ಲಿ ವಿವಾಹವನ್ನು ಪವಿತ್ರವಾಗಿ ನೋಡಲಾಗುತ್ತಿದ್ದು, ವೈವಾಹಿಕ ಅತ್ಯಾಚಾರ ಎನ್ನುವ ಪದಕ್ಕೆ ಭಾರತದಲ್ಲಿ ಜಾಗವಿಲ್ಲ ಎಂಬ ಕೇಂದ್ರ ಸರ್ಕಾರ ಆದೇಶವನ್ನು ಕಾಂಗ್ರೆಸ್ ನಾಯಕಿ ಹಾಗೂ ನಟಿ ಖುಷ್ಬೂ ವಿರೋಧಿಸಿದ್ದು, ಮದುವೆ ಪವಿತ್ರ ಹೌದು ಆದರೆ ವೈವಾಹಿಕ ಅತ್ಯಾಚಾರ ಪವಿತ್ರ ಅಲ್ಲ ಎಂದು ಹೇಳಿದ್ದಾರೆ.

ವಿಶ್ವಸಂಸ್ಥೆಯ ಜನಸಂಖ್ಯಾ ನಿಧಿಯ ಪ್ರಕಾರ ಮದುವೆಯಾದ ಶೇ. 75ರಷ್ಟು ಮಹಿಳೆಯರು ವೈವಾಹಿಕ ಅತ್ಯಾಚಾರಕ್ಕೆ ಒಳಗಾಗುತ್ತಾರೆ. ಈ ವಿಚಾರಕ್ಕೆ ಸಂಬಂಧಿಸಿ ಸರ್ಕಾರ ಅಗತ್ಯ ಕ್ರಮ ಕೈಗೊಂಡಿದೆಯೇ ಎಂದು ವೈವಾಹಿಕ ಅತ್ಯಾಚಾರ ಕುರಿತಂತೆ ಡಿಎಂಕೆ ರಾಜ್ಯಸಭಾ ಸದಸ್ಯೆ ಕನಿಮೋಳಿ ಅವರು ಕೇಳಿದ ಪ್ರಶ್ನೆಗೆ ಲಿಖಿತ ಉತ್ತರ ನೀಡಿದ್ದ ಕೇಂದ್ರ ಗೃಹ ಖಾತೆ ಸಹಾಯಕ ಸಚಿವ ಹರಿಭಾಯ್ ಪರಾಥಿಭಾಯ್ ಚೌಧರಿ  ಅವರು,  ಮದುವೆಯನ್ನು ಭಾರತದಲ್ಲಿ ಪವಿತ್ರ ಸ್ಥಾನದಲ್ಲಿ ನೋಡುತ್ತಿದ್ದು, ವೈವಾಹಿಕ ಅತ್ಯಾಚಾರ ಪರಿಕಲ್ಪನೆ ಎಂಬುದು ಭಾರತಕ್ಕೆ ಸೂಕ್ತವಾದುದಲ್ಲ ಎಂದು ಹೇಳಿದ್ದರು.

ಹರಿಭಾಯ್ ಪರಾಥಿಭಾಯ್ ಚೌಧರಿ ಈ ಪ್ರತಿಕ್ರಿಯೆಗೆ ಆಶ್ಚರ್ಯ ವ್ಯಕ್ತಪಡಿಸಿರುವ ಕಾಂಗ್ರೆಸ್ ನಾಯಕಿ ಹಾಗೂ ನಟಿ ಖುಷ್ಬೂ ಅವರು ಪ್ರತಿಯೊಂದು ಮನೆಯಲ್ಲಿಯೂ ಮಹಿಳೆಯ ಮೇಲೆ ವೈವಾಹಿಕ ಅತ್ಯಾಚಾರ ನಡೆದೇ ಇರುತ್ತದೆ. ನೀವು ಯಾವುದೇ ಮನೆಯನ್ನು ಬೇಕಾದರೂ ಹೋಗಿ ಕೇಳಬಹುದು. ಆ ಮನೆಯ ಮಹಿಳೆ ಈ ಪ್ರಶ್ನೆಗೆ ಹೌದು ಎಂದು ಹೇಳುತ್ತಾಳೆ. ಮಹಿಳೆಗೆ ತನ್ನದೇ ಆತ ಗೌರವ ಹಾಗೂ ಬೆಲೆಯಿದೆ. ಲೋಕಸಭೆ ಹೇಳಿದ ತಕ್ಷಣ ಸತ್ಯವನ್ನು ಸುಳ್ಳಾಗಿ ಬದಲಿಸಲು ಸಾಧ್ಯವಿಲ್ಲ. ಸತ್ಯ ಎಂದಿಗೂ ಸತ್ಯವೇ ಆಗಿರುತ್ತದೆ ಎಂದು ಹೇಳಿದ್ದಾರೆ.

ಇದೇ ವೇಳೆ ಹರಿಭಾಯ್ ಪರಾಥಿಭಾಯ್ ಚೌಧರಿ ಹೇಳಿಕೆಯನ್ನು ವಿರೋಧಿಸಿರುವ ಖುಷ್ಬೂ ಅವರು ಅತ್ಯಾಚಾರಕ್ಕೆ ಅನಾಮಿಕ ವ್ಯಕ್ತಿ ಅಥವಾ ಗಂಡ ಎಂಬ ವ್ಯತ್ಯಾಸವಿಲ್ಲ. ಮಹಿಳೆಗೆ ಇಷ್ಟವಿಲ್ಲದೆ ಬಲವಂತದಿಂದ ಆಕೆಯ ಮೇಲೆ ಯಾರೇ ಅತ್ಯಾಚಾರ ಮಾಡಿದರೂ ಅದು ಅತ್ಯಾಚಾರವೇ ಎಂದು ಹೇಳಿದ್ದಾರೆ.

SCROLL FOR NEXT