ಮೊಗ (ಪಂಜಾಬ್): ನಿನ್ನೆಯಷ್ಟೇ ಚಲಸುತ್ತಿದ್ದ ಬಸ್ ನಲ್ಲಿ ಬಾಲಕಿಗೆ ಲೈಂಗಿಕ ಕಿರುಕುಳ ನೀಡಿ ಬಾಲಕಿ ಸಾವಿಗೆ ಕಾರಣವಾದ ಘಟನೆಯ ಹಿಂದೆಯೇ ಪಂಜಾಬ್ ನ ಮೊಗ ಜಿಲ್ಲೆಯಲ್ಲಿ ಮತ್ತೊಂದು ಲೈಂಗಿಕ ದೌರ್ಜನ್ಯ ಪ್ರಕರಣ ಬೆಳಕಿಗೆ ಬಂದಿದೆ.
ಮೊಗದಲ್ಲಿ ಪರಿಚಿತ ವ್ಯಕ್ತಿಯೇ ಮಹಿಳೆಯೊಬ್ಬಳ ಮೇಲೆ ತನ್ನ ಸ್ನೇಹಿತರೊಂದಿಗೆ ಸೇರಿ ಸಾಮೂಹಿಕ ಅತ್ಯಾಚಾರ ಮಾಡಿರುವ ಘಟನೆ ಬೆಳಕಿಗೆ ಬಂದಿದೆ. 23 ವರ್ಷದ ಮಹಿಳೆಯೊಬ್ಬಳು ತನ್ನ ಮೇಲೆ ಸಾಮೂಹಿಕ ಅತ್ಯಾಚಾರವಾಗಿದೆ ಎಂದು ಪೊಲೀಸರಲ್ಲಿ ದೂರಿದ್ದಾಳೆ. ಪಂಜಾಬ್ ನ ಮೊಗ ಜಿಲ್ಲೆಯಿಂದ ಸುಮಾರು 180 ಕಿಮಿ ದೂರದಲ್ಲಿರುವ ಮರ್ಹಿ ಮುಸ್ತಾಫ ಗ್ರಾಮದಲ್ಲಿ ಈ ಘಟನೆ ನಡೆದಿದ್ದು, ಸತತ ಎರಡು ದಿನಗಳ ಕಾಲ ತನ್ನ ಸ್ನೇಹಿತೆಯ ಗಂಡ ಮತ್ತು ಆತನ ಸ್ನೇಹಿತರು ಸೇರಿಕೊಂಡು ತನ್ನ ಮೇಲೆ ನಿರಂತರ ಅತ್ಯಾಚಾರ ಮಾಡಿದ್ದಾರೆ ಎಂದು ಮಹಿಳೆ ಆರೋಪಿಸಿದ್ದಾಳೆ.
"ಬುಧವಾರ ಸಂಜೆ ತನ್ನ ಸ್ನೇಹಿತನೊಂದಿಗೆ ಮರ್ಹಿ ಮುಸ್ತಾಫಾ ಗ್ರಾಮದಲ್ಲಿರುವ ಸ್ನೇಹಿತೆಯನ್ನು ನೋಡಲು ತೆರಳಿದ್ದೆವು. ರಾತ್ರಿಯಾದ್ದರಿಂದ ಅಲ್ಲಿಯೇ ಉಳಿಯಲು ನಿರ್ಧರಿಸಿದ್ದೆವು. ರಾತ್ರಿ ತನ್ನ ಸ್ನೇಹಿತರೊಂದಿಗೆ ಪಾನಮತ್ತನಾಗಿ ಆಗಮಿಸಿದ ಸ್ನೇಹಿತೆಯ ಗಂಡ ನನ್ನ ಸ್ನೇಹಿತನನ್ನು ಥಳಿಸಿ ಆತನನ್ನು ಕೊಠಡಿಯೊಂದರಲ್ಲಿ ಕೂಡಿ ಹಾಕಿ, ನನ್ನನ್ನು ತನ್ನ 8 ಮಂದಿ ಸ್ನೇಹಿತರೊಂದಿಗೆ ಸಾಮೂಹಿಕವಾಗಿ ಬಲಾತ್ಕಾರ ಮಾಡಿದ್ದಾನೆ. ಸತತ 2 ದಿನಗಳ ಕಾಲ ನಿರಂತರ ಅತ್ಯಾಚಾರ ಮಾಡಿ ಬಳಿಕ ಗುರುವಾರ ತನ್ನನ್ನು ಬಿಟ್ಟಿದ್ದಾನೆ" ಎಂದು ಮಹಿಳೆ ಆರೋಪಿಸಿದ್ದಾಳೆ.
ಪ್ರಸ್ತುತ ಪ್ರಕರಣ ದಾಖಲಿಸಿಕೊಂಡಿರುವ ಸ್ಥಳೀಯ ಪೊಲೀಸರು ಮಹಿಳೆಯನ್ನು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಿದ್ದಾರೆ. ಅಲ್ಲದೆ ಮಹಿಳೆ ಅತ್ಯಾಚಾರ ಮಾಡಿದ್ದಾರೆ ಎನ್ನಲಾದ 8 ಮಂದಿಯ ಬಂಧನಕ್ಕೆ ಜಾಲ ಬೀಸಿದ್ದಾರೆ.