ದೇಶ

ನೆಸ್ಲೆ ಪುನರುಜ್ಜೀವನಕ್ಕೆ ಯತ್ನ: ಮ್ಯಾಗಿಗೆ ಹೊಸ ರೂಪ

ನವದೆಹಲಿ: ಮ್ಯಾಗಿ ನಿಷೇಧದಿಂದ ಆಗಿರುವ ನಷ್ಟವನ್ನು ಹಾಗೂ ಕಳೆದುಕೊಂಡಿರುವ ವರ್ಚ ಸ್ಸನ್ನು ಪುನಃ ಪಡೆದುಕೊಳ್ಳುವ ಪ್ರಯತ್ನದಲ್ಲಿರುವ ನೆಸ್ಲೆ ಇದೀಗ ಹೊಸ ಉತ್ಪನ್ನಗಳನ್ನು ಹೊರ ತರಲು ಮುಂದಾಗಿದೆ.

ಇದರ ಜೊತೆ ಜೊತೆಗೆ ಜಾಹೀರಾತುಗಳ ಮೇಲೆ ಹೆಚ್ಚು ಹಣ ಸುರಿದು ಜನರನ್ನು ಸೆಳೆಯುವ ಯೋಜನೆ ಹಾಕಿದೆ. ತಿನಿಸು ಪ್ರಿಯರಿಂದ ದೂರವಾಗಿದ್ದ ಮ್ಯಾಗಿ ಹೊಸ ರೂಪದಲ್ಲಿ ಬರಲಿದೆಯೆಂಬ ಸೂಚನೆಯನ್ನೂ ನೆಸ್ಲೆ ನೀಡಿದೆ. ಮ್ಯಾಗಿಯನ್ನು ಮತ್ತೊಮ್ಮೆ ಮಾರುಕಟ್ಟೆಗೆ ತರುವುದು ಜನರಿಗೆ ತಲುಪಿಸುವುದು ನಮ್ಮ ಐದು ಪ್ರಮುಖ ಉದ್ದೇಶಗಳಲ್ಲಿ ಒಂದಾಗಿದೆ ಎಂದು ಶನಿವಾರದಂದು ಹೊಸತಾಗಿ ನೇಮಕವಾಗಿರುವ ನೆಸ್ಲೆಯ ವ್ಯವಸ್ಥಾಪಕ ನಿರ್ದೇಶಕ ಸುರೇಶ್ ನಾರಾಯಣನ್ ಪತ್ರಕರ್ತರಿಗೆ ತಿಳಿಸಿದ್ದಾರೆ.

ಮ್ಯಾಗಿ ಮಾತ್ರವಲ್ಲದೆ ಹೊಸ ಉತ್ಪನ್ನಗಳನ್ನು ಹೊರತರಲು ಮಾರುಕಟ್ಟೆ ಸಂಶೋಧನೆ ನಡೆಯುತ್ತಿದ್ದು, ಮ್ಯಾಗಿ ಮೇಲಿನ ನಿಷೇಧದಿಂದ ಕಂಪನಿಗಾದ ನಷ್ಟ ಹಾಗೂ ಇತರ
ಉತ್ಪನ್ನಗಳಿಗಾದ ಪರಿಣಾಮವನ್ನು ಸರಿಪಡಿಸಲು ಎಲ್ಲ ಪ್ರಯತ್ನ ಮಾಡಲಾಗುತ್ತಿದೆ ಎಂದು ಸುರೇಶ್ ತಿಳಿಸಿದ್ದಲ್ಲದೆ, ಜಾಹೀರಾತು ಹೆಚ್ಚಿಸು ವುದರ ಮೂಲಕ ಜನರನ್ನು ಮತ್ತೆ ತಲುಪುತ್ತೇವೆ  ಎಂದಿದ್ದಾರೆ. ಮ್ಯಾಗಿ ನಿಷೇಧದಿಂದಾಗಿ ಕಂಪನಿಗೆ ಕಳೆದ ತ್ರೈಮಾಸಿಕದಲ್ಲಿ ರು.64 ಕೋಟಿ ನಷ್ಟವಾಗಿದ್ದು, ಕಂಪನಿಯ ಒಟ್ಟು ಲಾಭ ಪ್ರಮಾಣದಲ್ಲಿ ಇಳಿಕೆ ಕಂಡಿದೆ. ಈ ತ್ರೈಮಾಸಿಕದಲ್ಲಿ ಕಂಪನಿಯ ಲಾಭ ರು.287 ಕೋಟಿ ಎಂದು ಆರ್ಥಿಕ ವಿಭಾಗ ತಿಳಿಸಿದೆ.

SCROLL FOR NEXT