ನವದೆಹಲಿ: ಉಧಂಪುರ ಉಗ್ರರ ದಾಳಿ ಕುರಿತಂತೆ ಕೇಂದ್ರ ಗೃಹ ಇಲಾಖೆಯು ಜಮ್ಮು-ಕಾಶ್ಮೀರದ ಪೊಲೀಸರಿಗೆ ಎರಡು ತಿಂಗಳ ಹಿಂದೆಯೇ ಎಚ್ಚರಿಕೆ ಸಂದೇಶ ನೀಡಿತ್ತು ಎಂದು ಮೂಲಗಳಿಂದ ತಿಳಿದುಬಂದಿದೆ.
ಉಧಂಪುರದ ಸುತ್ತಮುತ್ತ ಭದ್ರತಾ ಪಡೆಗಳಿಲ್ಲದ ಸ್ವತಂತ್ರ ಸ್ಥಳವಾಗಿದ್ದು, ಉಗ್ರರು ಈ ಪ್ರದೇಶದ ಮೂಲಕ ಒಳನುಸುಳಿ ದಾಳಿ ನಡೆಸಲು ಸಂಚು ರೂಪಿಸುತ್ತದೆ ಎಂದು ಕೇಂದ್ರ ಗುಪ್ತಚರ ಇಲಾಖೆಯು ಗೃಹ ಸಚಿವಾಲಯಕ್ಕೆ ಮಾಹಿತಿ ನೀಡಿತ್ತು. ಮಾಹಿತಿ ಪಡೆದ ಗೃಹ ಸಚಿವಾಲಯವು ಎಚ್ಚರಿಕೆ ವಹಿಸುವಂತೆ ಜಮ್ಮುಕಾಶ್ಮೀರ ಪೊಲೀಸರಿಗೆ ಸಲಹೆ ನೀಡಿತ್ತು ಎಂದು ಹೇಳಲಾಗುತ್ತಿದೆ.
ಯೋಧರು ಹಾಗೂ ಉಗ್ರರ ನಡುವೆ ಇಂದು ನಡೆದ ಗುಂಡಿನ ಕಾಳಗ ಉಧಂಪುರದಲ್ಲಿ ಯುದ್ಧದ ವಾತಾವರಣವನ್ನೇ ನಿರ್ಮಾಣ ಮಾಡಿತ್ತು. ಯೋಧರ ಗುಂಡಿನಿಂದ ಪಾರಾಗುವ ಸಲುವಾಗಿ ಸ್ಥಳೀಯ ಮನೆಯೊಂದಕ್ಕೆ ನುಗ್ಗಿದ್ದ ಇಬ್ಬರು ಉಗ್ರರು ಮನೆಯಲ್ಲಿದ್ದ ಮೂವರನ್ನು ಒತ್ತೆಯಾಳುಗಾಳಾಗಿರಿಸಿಕೊಂಡಿದ್ದರು. ಉಗ್ರರ ದಾಳಿ ಬಗ್ಗೆ ಖಚಿತ ಮಾಹಿತಿ ಪಡೆದ ಅಧಿಕಾರಿಗಳು ಭದ್ರತಾ ಸಿಬ್ಬಂದಿಗಳೊಂದಿಗೆ ಕಾರ್ಯಾಚರಣೆಗೆ ಮುಂದಾಗಿದ್ದು, ಕಾರ್ಯಾಚರಣೆ ವೇಳೆ ಇಂದು ಬೆಳಿಗ್ಗೆ ಓರ್ವ ಉಗ್ರನನ್ನು ಹೊಡೆದುರುಳಿಸಿತ್ತು. ನಂತರ ಇಂದು ಮಧ್ಯಾಹ್ನ ಮತ್ತೋರ್ವ ಉಗ್ರನನ್ನು ಸಜೀವವಾಗಿ ಬಂಧನೊಕ್ಕಳಪಡಿಸಿತ್ತು.