ಬಿಹಾರ್: ಡಿಎನ್ಎ ಹೇಳಿಕೆ ಕುರಿತಂತೆ ಮೋದಿಗೆ ನಿತೀಶ್ ಕುಮಾರ್ ಬರೆದ ಪತ್ರಕ್ಕೆ ಎನ್‌ಡಿಎ ನಾಯಕರು ಗುರುವಾರ ತಿರುಗೇಟು ನೀಡಿದ್ದು, ಬಿಹಾರ ರಾಜ್ಯ ನಿತೀಶ್ ಕುಮಾರ್ ಅವರದಲ್ಲ, ನಿತೀಶ್ ಕುಮಾರ್ ಬಿಹಾರದವರಲ್ಲ ಎಂದು ಹೇಳಿದೆ.
ಬಿಹಾರ ಚುನಾವಣೆ ಸಂಬಂಧ ಸಾರ್ವಜನಿಕ ಸಭೆಯಲ್ಲಿ ಮಾತನಾಡಿದ್ದ ಪ್ರಧಾನಿಮಂತ್ರಿ ನರೇಂದ್ರ ಮೋದಿ ಅವರು, ನಿತೀಶ್ ಕುಮಾರ್ ನನ್ನೊಬ್ಬನಿಗೆ ಮಾತ್ರವೇ ಅಗೌರವ ಸೂಚಿಸಿಲ್ಲ. ಮಹಾದಲಿತರಾದ ಜಿತನ್ ರಾಮ್ ಮಾಂಝಿ ಅವರಿಗೂ ಈ ಹಿಂದೆ ಅಗೌರವ ಸೂಚಿಸಿದ್ದಾರೆ. ಇಲ್ಲಿರುವ ಜನತೆಯ ಡಿಎನ್ಎಗೂ ನಿತೀಶ್ ಕುಮಾರ್ ಅವರ ಡಿಎನ್ ಎಗೂ ಸಾಕಷ್ಟು ವ್ಯತ್ಯಾಸಿವಿದ್ದು, ಅವರ ಡಿಎನ್ಎಯಲ್ಲಿ ಏನಾದರೂ ಸಮಸ್ಯೆ ಇರಬಹುದು ಎಂದು ಹೇಳಿದ್ದರು.
ಈ ಹೇಳಿಕೆಗೆ ವಿರೋಧ ವ್ಯಕ್ತಪಡಿಸಿದ್ದ ನಿತೀಶ್ ಕುಮಾರ್ ಅವರು ನಿನ್ನೆಯಷ್ಟೇ ಸಾಮಾಜಿಕ ಜಾಲತಾಣದ ಮೂಲಕ ಮೋದಿ ಅವರಿಗೆ ಬಹಿರಂಗ ಪತ್ರಬರೆದಿದ್ದರು. ಪತ್ರದಲ್ಲಿ ಕೆಲವು ದಿನಗಳ ಹಿಂದೆ ಬಿಹಾರ ಚುನಾವಣೆ ಸಂಬಂಧ ರ್ಯಾಲಿ ವೇಳೆ ನನ್ನ ಡಿಎನ್ಎ ಕುರಿತಂತೆ ಹೇಳಿಕೆ ನೀಡಿದ್ದಿರಿ. ಈ ಹೇಳಿಕೆ ಕೇವಲ ಬಿಹಾರದಲ್ಲಿರುವ ಜನತೆಗಷ್ಟೇ ಅಲ್ಲದೇ ಹೊರ ರಾಜ್ಯದಲ್ಲಿರುವ ಬಿಹಾರ ಜನರಿಗೂ ನೋವುಂಟು ಮಾಡಿದೆ. ನಿಮ್ಮ ನಾಯಕತ್ವದ ಮೇಲೆ ಜನರಿಟ್ಟಿರುವ ನಂಬಿಕೆಗಳು ಈ ರೀತಿಯ ಹೇಳಿಕೆಗಳಿಂದ ಹಾಳಾಗಲಿದೆ. ಬಿಹಾರ ಜನತೆಯಲ್ಲಿರುವ ಡಿಎನ್ಎ ಯಂತೆಯೇ ನನ್ನ ಡಿಎನ್ಎ ಇರುವುದು. ಬಿಹಾರದ ಗ್ರಾಮಾಂತರ ಪ್ರದೇಶದಲ್ಲಿ ನಾನು ಬೆಳೆದದ್ದು, ಈ ರೀತಿಯ ಹೇಳಿಕೆಗಳು ನನ್ನ ಜೀವನದ ಮೇಲೆ ಪರಿಣಾಮ ಬೀರಲಿದ್ದು, ಬಿಹಾರ ಜನತೆಯಲ್ಲಿ ಹಲವು ಅನುಮಾನಗಳನ್ನು ಹುಟ್ಟುಹಾಕುತ್ತವೆ. ಕೂಡಲೇ ತಮ್ಮ ಹೇಳಿಕೆಯನ್ನು ಹಿಂಪಡೆಯಿರಿ ಎಂದು ಹೇಳಿದ್ದರು.
ನಿತೀಶ್ ಕುಮಾರ್ ಪತ್ರಕ್ಕೆ ಇದೀಗ ಎನ್‌ಡಿಎ ನಾಯಕರು ಬಿಹಾರ ರಾಜ್ಯ ನಿತೀಶ್ ಕುಮಾರ್ ಅವರದಲ್ಲ, ನಿತೀಶ್ ಕುಮಾರ್ ಬಿಹಾರದವರಲ್ಲ ಎಂಬ ಶೀರ್ಷಿಕೆಯಡಿ ನಿತೀಶ್ ಕುಮಾರ್ ಪತ್ರವೊಂದನ್ನು ಬರೆದಿದ್ದು, ನಿಮ್ಮ ಪತ್ರದಿಂದಾಗಿ ಬಹಳ ಬೇಸರವಾಗಿದ್ದು, ಇದೊಂದು ಫ್ಲಾಪ್ ಆಗಿರುವ ಹಾಸ್ಯಕರ ಸಿನಿಮಾದಂತಿದೆ. ಪತ್ರದಲ್ಲಿ ಬಿಹಾರ ಜನತೆಗೆ ಅವಮಾನ ಮಾಡಿದ್ದೀರೆ ಎಂದು ಬರೆದ್ದೀರಿ. ಮೋದಿ ಅವರು ಸಭೆಯಲ್ಲಿ ನಿತೀಶ್ ಕುಮಾರ್ ಅವರ ಡಿಎನ್ಎ ಬಗ್ಗೆ ಮಾತನಾಡಿದ್ದರೆಯೇ ಹೊರತು, ಬಿಹಾರ ರಾಜ್ಯದ ಜನತೆಯ ಡಿಎನ್ಎ ಬಗ್ಗೆಯಲ್ಲ. ಬಿಹಾರ ರಾಜ್ಯಕ್ಕೆ ಅಭಿವೃದ್ಧಿಯ ಅಗತ್ಯವಿದೆಯೇ ಹೊರತು ಅಹಂಕಾರದ ಅಧಿಕಾರದ ಪ್ರವೃತ್ತಿಯಲ್ಲ ಎಂದು ಹೇಳಿದ್ದಾರೆ.