ನವದೆಹಲಿ: ಜಮ್ಮು ಮತ್ತು ಕಾಶ್ಮೀರದ ಉಧಾಂಪುರ ಜಿಲ್ಲೆಯಲ್ಲಿ ಉಗ್ರರ ದಾಳಿ ನಡೆಯುವ ಬಗ್ಗೆ ಗುಪ್ತಚರ ಇಲಾಖೆಯಿಂದ ಯಾವುದೇ ಮಾಹಿತಿ ಬಂದಿರಲಿಲ್ಲ ಎಂದು ಗಡಿ ರಕ್ಷಣಾ ಪಡೆ(ಬಿಎಸ್‌ಎಫ್) ಗುರುವಾರ ಹೇಳಿದೆ.
'ಉಗ್ರ ದಾಳಿಯಲ್ಲಿ ನಮ್ಮ ಇಬ್ಬರು ಯೋಧರು ಹುತಾತ್ಮರಾಗಿದ್ದು, 14 ಮಂದಿ ಗಾಯಗೊಂಡಿದ್ದಾರೆ. ಆ ಪೈಕಿ ಓರ್ವ ಯೋಧನ ಸ್ಥಿತಿ ಗಂಭೀರವಾಗಿದೆ' ಎಂದು ಬಿಎಸ್‌ಎಫ್ ಮಹಾ ನಿರ್ದೇಶಕ ಡಿ.ಕೆ.ಪಾಠಕ್ ಅವರು ಹೇಳಿದ್ದಾರೆ.
'ಉಗ್ರರು ದಾಳಿ ನಡೆಸಿದ ಬಸ್‌ನಲ್ಲಿ ಕೇವಲ ಒಬ್ಬ ಯೋಧ ಮಾತ್ರ ಶಸ್ತ್ರಸಜ್ಜಿತನಾಗಿದ್ದ. ಆತ ಒಬ್ಬನೇ ಪರಿಸ್ಥಿತಿಯನ್ನು ಸಮರ್ಥವಾಗಿ ಎದುರಿಸಿದ್ದಾನೆ. ಇಲ್ಲದಿದ್ದರೆ ಮತ್ತಷ್ಟು ಸಾವು ಸಂಭವಿಸುವ ಸಾಧ್ಯತೆ ಇತ್ತು' ಎಂದು ಪಾಠಕ್ ಹೇಳಿದ್ದಾರೆ.
ಕಳೆದ 20 ವರ್ಷಗಳಿಂದ ಇಲ್ಲಿ ಯಾವುದೇ ದಾಳಿಗಳು ನಡೆದಿಲ್ಲ. ಇದು ತುಂಬಾ ಸುರಕ್ಷಿತ ವಲಯ ಎಂದು ಅವರು ತಿಳಿಸಿದ್ದಾರೆ.