ಫೈಸಲಾಬಾದ್: ಜಮ್ಮು ಕಾಶ್ಮೀರದ ಉಧಂಪುರದಲ್ಲಿ ಗಡಿ ಭದ್ರತಾ ಯೋಧರ ಮೇಲೆ ದಾಳಿ ನಡೆಸಿ ಜೀವಂತವಾಗಿ ಸೆರೆ ಸಿಕ್ಕಿರುವ ಪಾಕ್ ಉಗ್ರ ಮೊಹಮ್ಮದ್ ನಾವೇದ್ ಅಲಿಯಾಸ್ ಉಸ್ಮಾನ್ ಖಾನ್ ಪಾಕಿಸ್ತಾನದ ನಿವಾಸಿ ಎಂಬುದಕ್ಕೆ ಸಾಕ್ಷ್ಯಾಧಾರಗಳು ಸಿಕ್ಕಿವೆ.
ಮೊಹಮ್ಮದ್ ನಾವೇದ್ ತಂದೆ ಮೊಹಮ್ಮದ್ ಯಾಕೂಬ್ ಮತ್ತು ಆತನ ಇಬ್ಬರು ಮಕ್ಕಳು ಪಾಕಿಸ್ತಾನದ ಫೈಸಲಾಬಾದ್ ನ ರಫೀಕ್ ಕಾಲೋನಿಯ ಕೊನೆಯಲ್ಲಿರುವ ಸ್ಟ್ರೀಟ್ ನಂಬರ್ 3ರಲ್ಲಿರುವ ಮನೆಯಲ್ಲಿ ವಾಸವಾಗಿದ್ದಾರೆ. ಇದನ್ನು ಸ್ಥಳೀಯರು ಕೂಡಾ ಸ್ಪಷ್ಟಪಡಿಸಿದ್ದಾರೆ. ಮೊಹಮ್ಮದ್ ಯಾಕೂಬ್ ಅವರ 3ನೇ ಮಗನೇ ಉಧಂಪುರಲ್ಲಿ ಸೆರೆಸಿಕ್ಕ ಮೊಹಮ್ಮದ್ ನಾವೇದ್ ಎಂಬುದಾಗಿಯೂ ತಿಳಿಸಿದ್ದಾರೆ.
ತಮ್ಮ ಮನೆ ಫೈಸಲಾಬಾದ್ ನ ಗುಲಾಂ ಮೊಹಮ್ಮದಾಬಾದ್ ನ ಒಳಭಾಗದಲ್ಲಿ ಇದ್ದಿರುವುದಾಗಿ ನಾವೇದ್ ಪೊಲೀಸರ ವಿಚಾರಣೆ ವೇಳೆ ತಿಳಿಸಿದ್ದನು. ಸೆರೆಸಿಕ್ಕ ಮೊಹಮ್ಮದ್ ನಾವೇದ್ ತಮ್ಮ ದೇಶದ ನಾಗರಿಕ ಅಲ್ಲ ಎಂದು ಪಾಕಿಸ್ತಾನ ತನ್ನ ಹಳೇ ಚಾಳಿಯನ್ನು ಮುಂದುವರಿಸಿತ್ತು. ಆದರೆ ಮೊಹಮ್ಮದ್ ಯಾಕೂಬ್ ಹಿಂದೂಸ್ತಾನ್ ಟೈಮ್ಸ್ ಗೆ ನೀಡಿರುವ ಸಂದರ್ಶನದಲ್ಲಿ, ನಾನೇ ನಾವೇದನ ದುರದೃಷ್ಟ ತಂದೆ ಎಂದು ತಿಳಿಸಿದ್ದರು.