ಕೋಲ್ಕತಾ: ಕ್ಯಾಬಿನೆಚ್ ಮಂತ್ರಿಗೆ ಸನ್ಮಾನಿಸಲು ವಿರೋಧ ವ್ಯಕ್ತಪಡಿಸಿದಕ್ಕಾ ವಿದ್ಯಾರ್ಥಿಯೊಬ್ಬನಿಗೆ ಸಾಯುವಂತೆ ಹೊಡೆದಿರುವ ಘಟನೆಯೊಂದು ಪಶ್ಚಿಮ ಬಂಗಾಳದ ಕಾಲೇಜೊಂದರಲ್ಲಿ ಶುಕ್ರವಾರ ನಡೆದಿದೆ.
ಪಶ್ಚಿಮ ಬಂಗಾಳದ ಕಾಲೇಜಿನ ಎಲ್ಲಾ ಕ್ಯಾಂಪಸ್ ಗಳನ್ನು ತನ್ನ ಅಧಿಕಾರಕ್ಕೆ ಬರುವಂತೆ ಯತ್ನ ನಡೆಸುತ್ತಿರುವ ಪಶ್ಚಿಮ ಬಂಗಾಳದ ಟಿಎಂಸಿ ಪಕ್ಷ ಕಾಲೇಜೊಂದರಲ್ಲಿ ಶುಕ್ರವಾರ ತನ್ನ ಶಕ್ತಿ ಪ್ರದರ್ಶಿಸಿರುವುದು ಇದೀಗ ವಿದ್ಯಾರ್ಥಿಯೊಬ್ಬ ಸಾವಿಗೀಡಾವುದಕ್ಕೆ ಕಾರಣವಾಗಿದೆ.
ಸಾವಿಗೀಡಾದ ವಿದ್ಯಾರ್ಥಿಯನ್ನು ಕೃಷ್ಣಪ್ರಸಾದ್ ಜನ ಎಂದು ಹೇಳಲಾಗುತ್ತಿದ್ದು, ಈತ ಕಾಂಗ್ರೆಸ್ ವಿದ್ಯಾರ್ಥಿ ಪರಿಷತ್ ನ ಸದಸ್ಯನಾಗಿದ್ದ ಎಂದು ತಿಳಿದುಬಂದಿದೆ. ಟಿಎಂಸಿಪಿ ಸದಸ್ಯರು ಕ್ಯಾಬಿನೆಟ್ ಮಂತ್ರಿ ಸೌಮೆನ್ ಮಹಾಪಾತ್ರ ಅವರಿಗೆ ಸನ್ಮಾನ ನಡೆಸಲು ತೀರ್ಮಾನಿಸಿ ವಿದ್ಯಾರ್ಥಿ ಪರಿಷತ್ ಸದಸ್ಯರನ್ನು ಒತ್ತಾಯಿಸಿದ್ದಾರೆ. ಇದಕ್ಕೆ ವಿರೋಧ ಕೃಷ್ಣಪ್ರಸಾದ್ ಜನ ವಿರೋಧ ವ್ಯಕ್ತಪಡಿಸಿದ್ದಕ್ಕೆ ಟಿಎಂಸಿಪಿ ಸದಸ್ಯರು ವಿದ್ಯಾರ್ಥಿಗೆ ಸಾವಿಗೀಡಾಗುವಂತೆ ಹೊಡೆದಿದ್ದಾರೆ ಎಂದು ಹೇಳಲಾಗುತ್ತಿದೆ.
ಏನಿದು ಪ್ರಕರಣ?
ಪಶ್ಚಿಮ ಬಂಗಾಳದ ಸಬಂಗ್ ನ ನೆರೆ ಪೀಡಿತ ಪ್ರದೇಶಗಳಿಗೆ ತೃಣಮೂಲ ಕಾಂಗ್ರೆಸ್ ಸಚಿವ ಸೌಮೆನ್ ಮಹಾಪಾತ್ರ ಅವರು ನೀಡುತ್ತಿರುವುದಾಗಿ ಹೇಳಿದ ಟಿಎಂಸಿಪಿ ಪಕ್ಷದ ಕಾರ್ಯಕರ್ತರು ಸೌಮೆನ್ ಅವರಿಗೆ ಕಾಲೇಜಿನಲ್ಲಿ ಸನ್ಮಾನ ಮಾಡಲು ಕಾಂಗ್ರೆಸ್ ವಿದ್ಯಾರ್ಥಿ ಪರಿಷತ್ ಸದಸ್ಯರು ಬೆಂಬಲ ಸೂಚಿಸುವಂತೆ ಒತ್ತಾಯಿಸಿದ್ದಾರೆ. ಇದಕ್ಕಾಗಿ ಕಾಲೇಜಿನ ಪ್ರತಿಯೊಂದು ಕೊಠಡಿಗೂ ಭೇಟಿ ನೀಡಿ ಎಲ್ಲಾ ವಿದ್ಯಾರ್ಥಿಗಳಿಗೂ ಮಾಹಿತಿ ತಿಳಿಸಿದ್ದಾರೆ. ಈ ವೇಳೆ ಕಾಂಗ್ರೆಸ್ ವಿದ್ಯಾರ್ಥಿ ಪರಿಷತ್ ನ ಸದಸ್ಯನಾಗಿರುವ ವಿದ್ಯಾರ್ಥಿಕೃಷ್ಣಪ್ರಸಾದ್ ಜನ ವಿರೋಧ ವ್ಯಕ್ತಪಡಿಸಿದ್ದಾರೆ.
ಕೃಷ್ಣಪ್ರಸಾದ್ ಜನ ವಿರೋಧ ವ್ಯಕ್ತಪಿಡಿಸಿರುವುದಕ್ಕೆ ಕೆಂಡಾಮಂಡಲವಾದ ಟಿಎಂಸಿಪಿ ಪಕ್ಷದ ಸದಸ್ಯರು ಕೃಷ್ಣಪ್ರಸಾದ್ ನನ್ನು ಎಳೆದು ದೊಡ್ಡ ದೊಡ್ಡ ದೊಣ್ಣೆ ಹಾಗೂ ಕಬ್ಬಿಣದ ರಾಡ್ ನಿಂದ ಆತನ ಮೇಲೆ ಹಲ್ಲೆ ನಡೆಸಿದ್ದಾರೆ. ಈ ವೇಳೆ ಸ್ಥಳದಲ್ಲಿದ್ದ ಇಬ್ಬರು ವಿದ್ಯಾರ್ಥಿಗಳು ಕೃಷ್ಣಪ್ರಸಾದ್ ನನ್ನು ರಕ್ಷಣೆ ಮಾಡಲು ಬಂದಾಗ ಅವರಿಗೂ ಥಳಿಸಿದ್ದಾರೆ. ಅಲ್ಲದೆ, ಕೃಷ್ಣಪ್ರಸಾದ್ ನೆರವಿಗೆ ಯಾರೂ ಬರಬಾರದೆಂಬ ಕಾರಣಕ್ಕೆ ಕಾಲೇಜಿನ ಪ್ರಾಂಶುಪಾಲರನ್ನು ಕೊಠಡಿಯಲ್ಲೇ ಕೂಡಿ ಹಾಕಿದ್ದಾರೆ. ನಂತರ ಕೃಷ್ಣಪ್ರಸಾದ್ ನನ್ನು ಸಾಯುವಂತೆ ಹೊಡೆದಿದ್ದಾರೆ.
ಟಿಎಂಸಿಪಿ ಸದಸ್ಯರು ಸ್ಥಳದಿಂದ ಹೊರಡುತ್ತಿದ್ದಂತೆ ಕೃಷ್ಣಪ್ರಸಾದ್ ಸ್ಥಿತಿ ಕಂಡ ಸ್ಥಳದಲ್ಲಿದ್ದ ವಿದ್ಯಾರ್ಥಿಗಳು ಆತನನ್ನು ಸ್ಥಳೀಯ ಆಸ್ಪತ್ರೆಗೆ ಸಾಗಿಸಲು ಮುಂದಾಗಿದ್ದಾರೆ. ಆದರೆ, ಆಸ್ಪತ್ರೆಗೆ ಕರೆದೊಯ್ಯುವಾಗ ಸ್ಥಳದ ಮಧ್ಯದಲ್ಲಿಯೇ ಸಾವನ್ನಪ್ಪಿದ್ದಾನೆಂದು ತಿಳಿದುಬಂದಿದೆ.
ಕಾಲೇಜಿನ ಗುಂಪು ಘರ್ಷಣೆಯಲ್ಲಿ ವಿದ್ಯಾರ್ಥಿ ಸಾವಿಗೀಡಾಗಿರುವುದಕ್ಕೆ ವಿರೋಧ ವ್ಯಕ್ತಪಡಿಸಿರುವ ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು, ಇದೊಂದು ನಾಚಿಕೆಗೇಡಿನ ಕೆಲಸವಾಗಿದ್ದು, ಘಟನೆಯಿಂದ ಸಾಕಷ್ಟು ನೋವಾಗಿದೆ. ಘಟನೆ ಕುರಿತಂತೆ ತನಿಖೆ ನಡೆಸಲು ಈಗಾಗಲೇ ಪೊಲೀಸರಿಗೆ ಸೂಚನೆ ನೀಡಲಾಗಿದ್ದು, ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಹೇಳಲಾಗಿದೆ ಎಂದು ಹೇಳಿದ್ದಾರೆ.
ಘಟನೆಯನ್ನು ಖಂಡಿಸಿರುವ ಶಿಕ್ಷಣ ಸಚಿವ ಪಾರ್ಥ ಚಟರ್ಜಿ ಅವರು, ಇದೊಂದು ದುರದೃಷ್ಟಕರ ಘಟನೆಯಾಗಿದ್ದು, ಘಟನೆ ಕುರಿತಂತೆ ಕಠಿಣ ಕ್ರಮ ಕೈಗೊಳ್ಳುವಂತೆ ಕಾಲೇಜಿನ ಆಡಳಿತ ಮಂಡಳಿ ಹಾಗೂ ಪ್ರಾಂಶುಪಾಲರಿಗೆ ಸೂಚನೆ ನೀಡಲಾಗಿದೆ ಎಂದು ಹೇಳಿದ್ದಾರೆ.
ಘಟನೆಗೆ ತೀವ್ರ ವಿರೋಧ ವ್ಯಕ್ತಪಡಿಸಿರುವ ಕಾಂಗ್ರೆಸ್ ಪಕ್ಷ ಸ್ಥಳದಲ್ಲಿ ಬಂದ್ ಗೆ ಕರೆ ನೀಡಿದ್ದು, ಟಿಎಂಸಿಪಿ ಪಕ್ಷದ ವಿರುದ್ಧ ಪ್ರತಿಭಟನೆ ಕಾಲೇಜಿನ ಆವರಣದಲ್ಲಿ ಪ್ರತಿಭಟನೆ ನಡೆಸುತ್ತಿದೆ ಎಂದು ತಿಳಿದುಬಂದಿದೆ. ಕಾಂಗ್ರೆಸ್ ನೀಡಿರುವ ಬಂದ್ ಕರೆಗೆ ಬಿಜೆಪಿ ಹಾಗೂ ಸಿಪಿಐಎಂ ಪಕ್ಷ ಬೆಂಬಲ ಸೂಚಿಸಿದೆ.