ನವದೆಹಲಿ: ಮುಂಗಾರು ಅಧಿವೇಶನದ ಉಳಿದ 3 ದಿನ ಸುಗಮ ಕಲಾಪ ನಡೆಯ ಬಯಸಿರುವ ಕಾಂಗ್ರೆಸೇತರ ಪ್ರತಿಪಕ್ಷಗಳು ಕಾಂಗ್ರೆಸನ್ನು ಮೂಲೆಗುಂಪು ಮಾಡಿದ್ದು ಸೋಮವಾರದ ಪ್ರಮುಖ ಬೆಳವಣಿಗೆ. ``ಕಲಾಪಕ್ಕೆ ಅಡ್ಡಿ ಮಾಡಿ ಹೋರಾಟ ಮಾಡಿದ್ದು ಸಾಕು. ಕಲಾಪದಲ್ಲಿ ಪಾಲ್ಗೊಳ್ಳಿ ಇಲ್ಲವೇ ನಿಮ್ಮ ಹಾದಿ ನಿಮಗೆ'' ಎಂದು ಸಮಾಜವಾದಿ ಪಕ್ಷದ ನಾಯಕ ಮುಲಾಯಂ ಸಿಂಗ್ ಕಾಂಗ್ರೆಸ್‍ಗೆ ಎಚ್ಚರಿಸಿದ್ದಾರೆ. ಈ ನಡುವೆ, ಕಾಂಗ್ರೆಸ್ ಹೊರತುಪಡಿಸಿ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದ ಪ್ರಮುಖ ಪ್ರತಿಪಕ್ಷಗಳ ಮುಖಂಡರು ಸ್ಪೀಕರ್ ಸುಮಿತ್ರಾ ಮಹಾಜನ್‍ರನ್ನು ಭೇಟಿ ಮಾಡಿ ಸುಗಮ ಕಲಾಪ ನಡೆಸಲು ನಮ್ಮ ಬೆಂಬಲ ಇದೆಎಂದು ತಿಳಿಸಿದ್ದಾರೆ. ಆದರೆ, ಪ್ರತಿಪಕ್ಷಗಳ ಈ ನಿಲು ವನ್ನು ವಿರೋಧಿಸಿರುವ ಕಾಂಗ್ರೆಸ್ ತನ್ನ ಹೋರಾಟವ ನ್ನು ಮುಂದುವರಿಸಲು ನಿರ್ಧರಿಸಿದೆ. ಅಮಾನತು ಶಿಕ್ಷೆಗೊಳಪಟ್ಟ ಸದಸ್ಯರು ಸೋಮವಾರಸದನದಲ್ಲಿ ಪಾಲ್ಗೊಂಡಿದ್ದರು. ಹೀಗಾಗಿ ಕಲಾಪ ಗಮವಾಗಿ ನಡೆಯಲು ಕಾಂಗ್ರೆಸ್ಸೇತರ ಪ್ರತಿ ಪಕ್ಷಗಳು ಬಯಸಿದ್ದವು. ಆದರೆ, ಕದನ ವಿರಾಮ ಘೋಷಿಸಲು ಸಿದ್ದವಿಲ್ಲದ ಕಾಂಗ್ರೆಸ್ ಸುಷ್ಮಾಸ್ವರಾಜ್, ವಸುಂಧರಾ ರಾಜೆ ಮತ್ತು ಚೌಹಾಣ್ ರಾಜಿನಾಮೆ ನೀಡುವವರೆಗೂ ಹೋರಾಟ ನಿಲ್ಲಿಸುವುದಿಲ್ಲ ಎಂದು ಪಟ್ಟು ಹಿಡಿಯಿತು.
ಕಲಾಪ ಆರಂಭವಾಗುತ್ತಿದ್ದಂತೆ ಉಭಯ ಸದನ ಗಳಲ್ಲಿ ಕಾಂಗ್ರೆಸ್ ಸದಸ್ಯರು ಬಿsತ್ತಿಪತ್ರ ಹಿಡಿದು ಕಪ್ಪು ಪಟ್ಟಿ ಧರಿಸಿ ಪ್ರತಿಭಟನೆ ನಡೆಸಿದರು. ಲೋಕಸಭೆಯಲ್ಲಿ ಲಲಿತ್ ಮೋದಿ ಮತ್ತು ವ್ಯಾಪಂ ಹಗರಣ ಕುರಿತು ಚರ್ಚೆಗೆ ಕಾಂಗ್ರೆಸ್ ಮಂಡಿಸಿದ್ದ ನಿಲುವಳಿಗೆ ಸ್ಪೀಕರ್ ಅವಕಾಶ ನೀಡಲಿಲ್ಲ. ಗೊಂದಲ ನಿವಾರಿಸಲು ಪ್ರತಿ ಪಕ್ಷಗಳ ಮುಖಂಡರ ಸಭೆ ನಡೆಸುವಂತೆ ಮುಲಾಯಂ ಸ್ಪೀಕರ್‍ಗೆ ಸಲಹೆ ಮಾಡಿದರು. ಆಗ ಗೊಂದಲವುಂಟಾಗಿ ಕಲಾಪ ಮುಂದೂಡಲಾಯಿತು. ಈ ವೇಳೆ ಎಸ್ಪಿ, ಆರ್‍ಜೆಡಿ, ಆಪ್, ಟಿಎಂಸಿ ನಾಯಕರು ಸುಮಿತ್ರಾ ಮಹಾಜನ್ ಜತೆ ಮಾತುಕತೆ ನಡೆಸಿದರು. ಕಾಂಗ್ರೆಸ್ ಮಾತುಕತೆಯಲ್ಲಿ ಭಾಗಿಯಾಗಲಿಲ್ಲ.
ಮತ್ತೆ ಕಲಾಪ ಆರಂಭವಾದಾಗ ಕಾಂಗ್ರೆಸ್ ಸದಸ್ಯರ ಗದ್ದಲದ ನಡುವೆಯೇ ಸದಸ್ಯರು ಸಾರ್ವಜನಿಕಮಹತ್ವದ ವಿಷಯಗಳನ್ನು ಸಭೆಯಲ್ಲಿ ಚರ್ಚಿಸಿದರು.
ಆದರೆ, ಗದ್ದಲ ಗೊಂದಲ ಮುಂದುವರಿಸಿದ್ದರಿಂದ ಕಲಾಪ ಮುಂದೂಡ
ಲಾಯಿತು.ರಾಜ್ಯಸಭೆಯಲ್ಲೂ ಕಲಾಪ ಆರಂಭವಾಗುತ್ತಿದ್ದಂತೆ ಕಾಂಗ್ರೆಸ್ ಸದಸ್ಯರು ಪ್ರತಿಭಟನೆ ಮುಂದುವರಿಸಿದ್ದರು. ಆದರೆ, ಜೆಡಿಯು ಸದಸ್ಯರು ಬಿಹಾರ, ಹಿಮಾಚಲ ಗಳಿಗೆ ರಾಜ್ಯಪಾಲರನ್ನು ನೇಮಕ ವೇಳೆ ಸಂವಿಧಾನಿಕ ಸತ್‍ಸಂಪ್ರದಾಯದಂತೆ ಮುಖ್ಯಮಂತ್ರಿಗಳೊಂದಿಗೆ ಸಮಾಲೋಚಿಸದ ಸರ್ಕಾರದ ಕ್ರಮ ಖಂಡಿಸಿ, ಚರ್ಚೆಗೆ ಅವಕಾಶ ನೀಡುವಂತೆ ಒತ್ತಾಯಿಸಿದರು.ಕೆರಳಿದ ಜೇಟ್ಲಿ: ಜೆಡಿಯು ನಾಯಕ ಕೆ.ಸಿ. ತ್ಯಾಗಿಗೆ ಮಾತನಾಡಲು ಉಪಸಭಾಪತಿ ಅವಕಾಶ ನೀಡಿದ್ದು, ಸಭಾ ನಾಯಕ ಅರುಣ್ ಜೇಟ್ಲಿ ಅವರನ್ನು ಕೆರಳಿಸಿತು. ``ಸರ್ಕಾರಕ್ಕೆ ಮಾತನಾಡಲು ಅವಕಾಶ ನೀಡದಂತೆ ನೀವು ಕಲಾಪ ನಡೆಸಲಾಗದು. ಸದನದ ಕಲಾಪ ನಡೆಯುತ್ತಿರುವ ರೀತಿ ದುರದಷ್ಟಕರ, ಕಲಾಪವನ್ನು ಸುಗಮವಾಗಿ ನಡೆಸುವುದು ನಿಮ್ಮ ಜವಾಬ್ದಾರಿ'' ಎಂದರು. ಕೆ.ಸಿ. ತ್ಯಾಗಿ ಅವರು, ``ಈ ಹಿಂದೆ ರಾಜ್ಯಪಾಲರನ್ನು ನೇಮಕ ಮಾಡುವಾಗ ಆಯಾ ರಾಜ್ಯಗಳ ಮುಖ್ಯಮಂತ್ರಿಗಳೊಂದಿಗೆ ಸಮಾಲೋಚನೆ ನಡೆಸಬೇಕು. ಇದು, ಸಾಂವಿಧಾನಿಕ ಸಂಪ್ರದಾಯ ಎಂದು ಜೇಟ್ಲಿ ಪ್ರತಿ ಪಕ್ಷದ ನಾಯಕರಾಗಿದ್ದಾಗ ಹೇಳಿದ್ದ ಮಾತುಗಳನ್ನು ಉಲ್ಲೇಖಿಸಿ ಉತ್ತರ ಬಯಸಿದರು. ಆದರೆ, ಕಾಂಗ್ರೆಸ್ ಗದ್ದಲದ ನಡುವೆ ಜೇಟ್ಲಿ ಅವರದ್ದು ಮೌನವೇ ಉತ್ತರವಾಗಿತ್ತು. ಕಾಂಗ್ರೆಸ್ ಪ್ರತಿಭಟನೆ ತೀವ್ರವಾ ದಾಗ ಉಪಸಭಾಪತಿ ಕಲಾಪ ಮುಂದೂಡಿದರು. ಇದಕ್ಕೂ ಮುನ್ನ ಕಾಂಗ್ರೆಸ್ ನಾಯಕ ಗುಲಾಂ ನಬಿ, ಆಡಳಿತ ಪ್ರತಿಪಕ್ಷಗಳ ಸಂಘರ್ಷ ನಿವಾರಿಸಿ ಸುಗಮ ಕಲಾಪಕ್ಕೆ ಅನುವು ಮಾಡಿಕೊಡುವ ನಿಟ್ಟಿನಲ್ಲಿ
ಆಡಳಿತ ಪಕ್ಷ ಯಾವುದೇ ಸಭೆ ನಡೆಸಿಲ್ಲ. ಸಭಾನಾಯಕ ನನಗೆ ದೂರವಾಣಿ ಕರೆ ಮಾಡಿದ್ದು ಅಮಾನತುಗೊಂಡ ಸದಸ್ಯರ ವಿಷಯ ಕುರಿತಂತೆ. ಸಂಘರ್ಷ ನಿವಾರಿಸಲು
ಯಾವುದೇ ಪ್ರಯತ್ನ ಆಡಳಿತ ಪಕ್ಷ ಮಾಡಿಲ್ಲ. ಇದನ್ನು ನಾನು ಸದನಕ್ಕೆ ಸ್ಪಷ್ಟ ಪಡಿಸುತ್ತೇನೆ'' ಎಂದರು.