ದೇಶ

ಸಂಸತ್ ನ ಸುಗಮ ಕಲಾಪಕ್ಕೆ ಒತ್ತಾಯಿಸಿ ಆನ್ ಲೈನ್ ನಲ್ಲಿ 15 ಸಾವಿರ ಸಹಿ

Srinivas Rao BV

ನವದೆಹಲಿ: ಕಾಂಗ್ರೆಸ್ ಪ್ರತಿಭಟನೆಯಿಂದಾಗಿ ಸಂಸತ್ ಕಲಾಪಕ್ಕೆ ಅಡ್ಡಿ ಉಂಟಾಗುತ್ತಿರುವ ಬಗ್ಗೆ ದೇಶಾದ್ಯಂತ ತೀವ್ರ ಅಸಮಾಧಾನ ವ್ಯಕ್ತವಾಗುತ್ತಿದೆ. ಮುಂಗಾರು ಅಧಿವೇಶನದ ಬಹುತೇಕ ಸಮಯ ಪ್ರತಿಭಟನೆಯಲ್ಲೇ ವ್ಯರ್ಥವಾಗಿದ್ದು, ಸಂಸತ್ ಕಲಾಪ ನಡೆಸಲು ಒತ್ತಾಯಿಸಿ ಆನ್ ಲೈನ್ ನಲ್ಲಿ 15000 ಜನರು ಸಹಿ ಹಾಕಿದ್ದಾರೆ.

ಸಂಸತ್ ಅಧಿವೇಶನದಲ್ಲಿ ಜಿ.ಎಸ್.ಟಿ ಸೇರಿದಂತೆ ಪ್ರಮುಖ ಮಸೂದೆಗಳು ಅಂಗೀಕಾರವಾಗದಿರುವುದರಿಂದ ಆತಂಕಕ್ಕೊಳಗಾಗಿರುವ ಆದಿ ಗೋದ್ರೆಜ್, ಕಿರಣ್ ಮಜುಮ್ದಾರ್ ಷಾ, ರಾಹುಲ್ ಬಜಾಜ್ ಸೇರಿದಂತೆ ಹಲವು ಉದ್ಯಮಿಗಳು ಸಹ ಸುಗಮ ಸಂಸತ್ ಕಲಾಪ ನಡೆಸಲು ಆನ್ ಲೈನ್ ಅರ್ಜಿಗೆ ಸಹಿಹಾಕಿದ್ದಾರೆ.

ದೇಶದ ಅಭಿವೃದ್ಧಿಗೆ ಪೂರಕವಾಗಿರುವ ಜಿ.ಎಸ್.ಟಿ, ಭೂಸ್ವಾಧೀನ ಕಾಯ್ದೆಯಂತಹ ಮಸೂದೆಗಳು ಪ್ರತಿಭಟನೆಯಿಂದಾಗಿ ಸ್ಥಗಿತಗೊಳ್ಳಬಾರದು ಎಂದು ಆನ್ ಲೈನ್ ಅರ್ಜಿಗೆ ಸಹಿ ಹಾಕಿರುವ ಉದ್ಯಮಿಗಳು ಅಭಿಪ್ರಾಯಪಟ್ಟಿದ್ದಾರೆ. ಮುಂಗಾರು ಅಧಿವೇಶನದ ಬಹುತೇಕ ಕಲಾಪಗಳು ಪ್ರತಿಭಟ್ನಎಯಿಂದಾಗಿ ಮುಂದೂಡಲಾಗುತ್ತಿದ್ದು, ಪ್ರಮುಖ ಮಸೂದೆಗಳು  ಅಂಗೀಕಾರವಾಗುತ್ತಿಲ್ಲ. ಇದು ದೇಶದ ಆರ್ಥಿಕತೆ ಮೇಲೆ ಪ್ರತಿಕೂಲ ಪರಿಣಾಮ ಬೀರುತ್ತಿದೆ ಎಂದು ಇತ್ತೀಚೆಗಷ್ಟೆ ಸಿಐಐ ಆತಂಕ ವ್ಯಕ್ತಪಡಿಸಿತ್ತು.

ರಾಜ್ಯಸಭೆಯಲ್ಲಿ ಆ.11 ರಂದು ಜಿ.ಎಸ್.ಟಿ ಮಸೂದೆಯನ್ನು ಮಂಡಿಸಿದಾಗಲೂ ಕಾಂಗ್ರೆಸ್ ನ ಸದಸ್ಯರು ಪ್ರತಿಭಟನೆ ನಡೆಸಿದ್ದರು. ಲಲಿತ್ ಮೋದಿ ಪ್ರಕರಣದ ಆರೋಪಿ ಸುಷ್ಮಾ ಸ್ವರಾಜ್, ವ್ಯಾಪಂ ಹಗರಣದ ಆರೋಪ ಎದುರಿಸುತ್ತಿರುವ ಮಧ್ಯಪ್ರದೇಶ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಹಾಗೂ ರಾಜಸ್ಥಾನ ಮುಖ್ಯಮಂತ್ರಿ ವಸುಂದರಾ ರಾಜೆ ರಾಜೀನಾಮೆ ಪಡೆಯುವವರೆಗೂ ಸಂಸತ್ ಕಲಾಪ ನಡೆಯಲು ಬಿಡುವುದಿಲ್ಲ ಎಂದು ಕಾಂಗ್ರೆಸ್ ಹೇಳಿದೆ.

SCROLL FOR NEXT