ದೇಶ

ಸಂಸತ್ತಿನಲ್ಲಿ ವಾಗ್ಧಾಳಿ: ಕಳ್ಳಚೀಟಿ ಬಿಚ್ಚಿಟ್ಟಿತು ರಾಹುಲ್ ರಹಸ್ಯ

ನವದೆಹಲಿ: ಮುಂಗಾರು ಅಧಿವೇಶನದಲ್ಲಿ ಲಲಿತ್ ಮೋದಿ ಹಗರಣ ಸಂಬಂಧ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಹಾಗೂ ಪ್ರಧಾನಮಂತ್ರಿ ನರೇಂದ್ರ ಮೋದಿ ವಿರುದ್ಧ ವಾಗ್ಧಾಳಿ ನಡೆಸಿ ಎಲ್ಲರ ಗಮನ ಸೆಳೆದಿದ್ದ ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಅವರ ಕಳ್ಳಚೀಟಿ ರಹಸ್ಯವೊಂದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.

ಲಲಿತ್ ಮೋದಿ ಭಾರತದಲ್ಲಿ ಕಪ್ಪುಹಣದ ಸಂಕೇತವಾಗಿದ್ದು, ಇಂತಹ ವ್ಯಕ್ತಿಗೆ ಸುಷ್ಮಾ ಸ್ವರಾಜ್ ಅವರು ಮಾನವೀಯತೆ ಎಂಬ ಹೆಸರಿನಲ್ಲಿ ಕದ್ದುಮುಚ್ಚಿ ಸಹಾಯ ಮಾಡಿದ್ದಾರೆ. ಜೈಲಿಗೆ ಹೋಗದಂತೆ ರಕ್ಷಿಸಲು ಸುಷ್ಮಾ ಸ್ವರಾಜ್ ಅವರು ಲಲಿತ್ ಮೋದಿಯಿಂದ ಹಣ ಪಡೆದುಕೊಂಡಿದ್ದಾರೆ. ಅಧಿಕಾರಕ್ಕೆ ಬರುವಾಗ ಪ್ರಧಾನಿಯವರು ಭ್ರಷ್ಟಾಚಾರಕ್ಕೆ ಎಂದಿಗೂ ಬೆಂಬಲ ಸೂಚಿಸುವುದಿಲ್ಲ. ನಾನು ತಿನ್ನುವುದಿಲ್ಲ. ತಿನ್ನುವವರಿಗೂ ಬಿಡುವುದಿಲ್ಲ ಎಂದು ಹೇಳಿದ್ದರು. ಆದರೆ, ಇದೀಗ ತಮ್ಮ ಪಕ್ಷದಲ್ಲಿರುವ ಮುಖಂಡರೇ ಭ್ರಷ್ಟಾಚಾರದಲ್ಲಿ ತೊಡಗಿದ್ದರೂ ಏನನ್ನೂ ಮಾತನಾಡದೇ ಮೌನಿಯಾಗಿದ್ದಾರೆ. ಕೇಂದ್ರ ಸರ್ಕಾರ ಮೋದಿ ಅವರ ರಕ್ಷಣೆಗೆ ನಿಂತಿದ್ದು, ಸಂಸತ್ತಿಗೆ ಬಂದರೆ ಪ್ರತಿಕ್ರಿಯೆ ನೀಡಬೇಕಾಗುತ್ತದೆ. ವಿವಾದದಲ್ಲಿ ಸಿಲುಕಿಕೊಳ್ಳಬೇಕಾಗುತ್ತದೆ ಎಂಬ ದೃಷ್ಟಿಯಿಂದ ಮೋದಿ ಅವರು ಸಂಸತ್ತಿಗೆ ಹಾಜರಾಗಿಲ್ಲ ಅವರಿಗೆ ಧೈರ್ಯವಿಲ್ಲ ಎಂದು ಎನ್ ಡಿಎ ಸರ್ಕಾರದ ವಿರುದ್ಧ ವಾಗ್ಧಾಳಿ ನಡೆಸಿದ್ದರು.

ಮುಂಗಾರು ಅಧಿವೇಶನದ ಸಮಯದಲ್ಲಿ ರಾಹುಲ್ ಗಾಂಧಿ ನಡೆಸಿದ ಈ ವಾಗ್ಧಾಳಿ ಹಿರಿಯ ಮುಖಂಡರುಗಳೇ ಹುಬ್ಬೇರಿಸುವಂತೆ ಮಾಡಿತ್ತು. ಆದರೆ, ಈ ವಾಗ್ಧಾಳಿಯ ಹಿಂದಿದ್ದ ಕಳ್ಳ ರಹಸ್ಯವೊಂದನ್ನು ಖಾಸಗಿ ಪತ್ರಿಕೆಯೊಂದರ ಫೋಟೋಗ್ರಾಫರೊಬ್ಬ ಫೋಟೋ ತೆಗೆಯುವ ಮೂಲಕ ಬಿಚ್ಚಿಟ್ಟಿದ್ದು, ಇದೀಗ ಸಾಮಾಜಿಕ ಜಾಲತಾಣದಾತ್ಯಂತ ಸುದ್ದಿ ಮಾಡುತ್ತಿದೆ.

ಪತ್ರಕರ್ತನನ್ನು ಟೆಲಿಗ್ರಾಫ್‌ ಪತ್ರಿಕೆಯ ಫೋಟೋಗ್ರಾಫರ್‌ ಪ್ರೇಮ್‌ ಸಿಂಗ್‌ ಎಂದು ಹೇಳಲಾಗುತ್ತಿದ್ದು, ಪ್ರೇಮ್ ಸಿಂಗ್ ತೆಗೆದಿರುವ ಫೋಟೋದಲ್ಲಿ ರಾಹುಲ್ ಗಾಂಧಿ ಅವರು ಯಾವ ಸಮಯದಲ್ಲಿ ಏನು ಮಾತನಾಡಬೇಕೆಂಬುದನ್ನು ಹಿಂದಿ ಹೇಳಿಕೆಗಳನ್ನು ಇಂಗ್ಲೀಷ್ ನಲ್ಲಿ ಬರೆಯಲಾಗಿದೆ. ರಾಹುಲ್ ಕೈಯಲ್ಲಿದ್ದ ನೋಟ್ಸ್ ನಲ್ಲಿ ಸುಷ್ಮಾ ಸ್ವರಾಜ್ ಅವರು ಮಾತನಾಡುವಾಗ ಯಾವ ಪ್ರಶ್ನೆ ಹಾಗೂ ಏನನ್ನು ಮಾತನಾಡಬೇಕು. ಇತರೆ ಮುಖಂಡರು ಮಾತನಾಡುವಾಗ ಯಾವ ಪ್ರಶ್ನೆ, ಏನನ್ನು ಮಾತನಾಡಬೇಕೆಂಬ ಅಂಶಗಳನ್ನು ಬರೆದಿರುವುದು ಕಂಡುಬಂದಿದೆ. ಲೋಗ್‌ ಪಿಎಂ ಮೋದಿ ಕೋ ಸುನ್ನಾ ಚಾಹ್ತೇ ಹೈ, ವೋ ವುನ್ಕೀ ರಾಯ್‌ ಜಾನ್ನಾ ಚಾಹ್ತೇ ಹೈ, ಮೋದಿ ಗೇಟ್‌ ಪರ್‌, ವ್ಯಾಪಂ ಪರ್‌..(ಪ್ರಧಾನಿ ಮೋದಿ ಅವರ ಮಾತುಗಳನ್ನು ಕೇಳಲು ಹಾಗೂ ಅವರ ಪ್ರತಿಕ್ರಿಯೆ ಏನೆಂಬುದನ್ನು ತಿಳಿಯಲು ಜನ ಕಾತರರಾಗಿದ್ದಾರೆ. ಲಲಿತ್ ಮೋದಿ ಪ್ರಕರಣ... ವ್ಯಾಪಂ ಹಗರಣ ವಿಚಾರಗಳನ್ನು... ) ಎಂದು ಆ ಚೀಟಿಯಲ್ಲಿ ಬರೆಯಲಾಗಿತ್ತು. ಇದಲ್ಲದೆ, ಗಾಂಧೀಜಿ ಅವರ ಮೂರುಗಳ ಮಂಗಳ ಬಗ್ಗೆಯೂ ಕಾಪಿ ಚೀಟಿಯಲ್ಲಿ ಬರೆಯಲಾಗಿತ್ತು.

ಎರಡೂ ವಿಷಯಗಳನ್ನಿಡಿದು ರಾಹುಲ್ ಗಾಂಧಿ ಸಂಸತ್ತಿನಲ್ಲಿ ಬಿಜೆಪಿ ನೇತೃತ್ವದ ಎನ್ ಡಿ ಸರ್ಕಾರದ ವಿರುದ್ಧ ನಡೆಸಿದ ವಾಗ್ಧಾಳಿ ಎಲ್ಲರ ಗಮನ ಸೆಳೆದಿತ್ತು. ಆದರೆ, ಕಳ್ಳಚೀಟಿ ರಹಸ್ಯ ಬಯಲಾದಾಗಿನಿಂದ ಸಾಮಾಜಿಕ ಜಾಲತಾಣದಲ್ಲಿ ರಾಹುಲ್ ವಿರುದ್ಧ ಹಲವಾರು ಚರ್ಚೆಗಳು ಆರಂಭವಾಗಿದ್ದು, ಶಾಲೆಯಲ್ಲಿದ್ದಾಗ ನಾವು ಕಾಪಿ ಮಾಡುತ್ತಿದ್ದೆವು. ಆದರೀಗ ದೊಡ್ಡವರಾಗಿದ್ದೇವೆ. ರಾಹುಲ್ ಗಾಂಧಿ ಕಾಪಿ ಮಾಡುವುದನ್ನು ಬಿಡದೆ ಸಂಸತ್ತಿನಲ್ಲೂ ಮುಂದುವರೆಸಿದ್ದಾರೆ ಎಂಬ ಪ್ರತಿಕ್ರಿಯೆ ನೀಡಿದ್ದರೆ. ಮತ್ತೊಬ್ಬ ವ್ಯಕ್ತಿ ರಾಹುಲ್ ಗಾಂಧಿ ಸಂಸತ್ತಿನಲ್ಲಿಯೇ ಕಾಪಿ ಮಾಡಿದ್ದಾರೆ. ಒಂದು ವೇಳೆ ಪ್ರಧಾನಮಂತ್ರಿಯಾದರೆ ಏನು ಮಾಡುವುದು ಎಂದು ವ್ಯಂಗ್ಯವಾಡಿದ್ದಾನೆ.

SCROLL FOR NEXT