ನವದೆಹಲಿ: ಗಡಿಯಲ್ಲಿ ನಿರಂತರವಾಗಿ ಕದನ ವಿರಾಮ ಉಲ್ಲಂಘನೆಯಾಗುತ್ತಿರುವುದರಿಂದ ಪಾಕಿಸ್ತಾನದ ಉದ್ದೇಶದ ಮೇಲೆ ಶಂಕೆ ಮೂಡುವಂತಾಗಿದೆ ಎಂದು ಬಿಜೆಪಿ ಆರೋಪಿಸಿದೆ.
ಗಡಿ ಪ್ರದೇಶದಲ್ಲಿ ದೌರ್ಜನ್ಯ ನಡೆಸುತ್ತಿದ್ದರೂ ಮೂಕ ಪ್ರೇಕ್ಷನನಂತೆ ಕುಳಿತಿರಲು ಸಾಧ್ಯವಿಲ್ಲ ಎಂದು ಬಿಜೆಪಿ ಪಾಕಿಸ್ತಾನಕ್ಕೆ ಎಚ್ಚರಿಕೆ ನೀಡಿದೆ. ಭಾರತ ಸರ್ಕಾರ ಪಾಕಿಸ್ತಾನದೊಂದಿಗೆ ಸೌಹಾರ್ದತೆ ಬೆಸೆಯಲು ಪ್ರಾಮಾಣಿಕ ಪ್ರಯತ್ನ ನಡೆಸಿದಾಗಲೆಲ್ಲಾ ಗಡಿಯಲ್ಲಿ ಕದನ ವಿರಾಮ ಉಲ್ಲಂಘನೆಯಾಗುತ್ತಿದೆ ಎಂದು ಬಿಜೆಪಿ ವಕ್ತಾರ ಸುಧಾಂಶು ತ್ರಿವೇದಿ ಆರೋಪಿಸಿದ್ದಾರೆ.
ಭಾರತದ ಗಡಿ ಪ್ರದೇಶದ ಮುಗ್ಧ ನಾಗರಿಕರನ್ನು ಹತ್ಯೆ ಮಾಡುವುದನ್ನು ಪಾಕಿಸ್ತಾನ ಮುಂದುವರೆಸುವುದನ್ನು ಮೂಕ ಪ್ರೇಕ್ಷಕರಂತೆ ಕುಳಿತಿರಲು ಸಾಧ್ಯವಿಲ್ಲ ಎಂದು ಬಿಜೆಪಿ ಹೇಳಿದೆ. ಪಾಕಿಸ್ತಾನ ನಡೆಸಿರುವ ದಾಳಿಗೆ ಈ ವರೆಗೂ 6 ಜನ ಮೃತಪಟ್ಟಿದ್ದು, 15 ನಾಗರಿಕರು ಗಾಯಗೊಂಡಿದ್ದಾರೆ. ಸ್ವಾತಂತ್ರ್ಯ ದಿನಾಚರಣೆಯಂದೂ ಪಾಕಿಸ್ತಾನ ಭಾರತದ ಮೇಲೆ ಶೆಲ್ ದಾಳಿ ನಡೆಸಿದ್ದು ಆಗಸ್ಟ್ 16 ರಂದು ಕದನ ವಿರಾಮ ಉಲ್ಲಂಘನೆ ನಡೆಸಿದೆ.