ನವದೆಹಲಿ: ಪ್ರಧಾನಮಂತ್ರಿ ನರೇಂದ್ರ ಮೋದಿ ಭಾನುವಾರ ತಮ್ಮ ಎರಡು ದಿನಗಳ ಯುನೈಟೆಡ್ ಅರಬ್ ಎಮಿರೇಟ್ಸ್(ಅರಬ್ ರಾಷ್ಟ್ರ) ಪ್ರವಾಸವನ್ನು ಆರಂಭಿಸಲಿದ್ದಾರೆ.
34 ವರ್ಷಗಳ ನಂತರ ಭಾರತೀಯ ಪ್ರಧಾನಿಯೊಬ್ಬರು ಗಲ್ಫ್ ರಾಷ್ಟ್ರಕ್ಕೆ ನೀಡುತ್ತಿರುವ ಪ್ರಥಮ ಭೇಟಿ ಇದಾಗಿದೆ.
ಅವರು ತಮ್ಮ ಭೇಟಿ ವೇಳೆ, ಅಲ್ಲಿನ ಪ್ರಧಾನಮಂತ್ರಿ ಹಾಗೂ ಉಪಾಧ್ಯಕ್ಷ ಮೊಹಮ್ಮದ್ ಬಿನ್ ರಶೀದ್ ಅಲ್ ಮಕ್ತೌಮ್ ಅವರನ್ನು ಭೇಟಿ ಮಾಡಲಿದ್ದಾರೆ. ಪ್ರಧಾನಮಂತ್ರಿಗಳು ತಮ್ಮ ಭೇಟಿ ಸಂದರ್ಭದಲ್ಲಿ, ಅಲ್ಲಿನ ಉನ್ನತ ನಾಯಕರೊಂದಿಗೆ ಉಭಯ ದೇಶಗಳ ಆರ್ಥಿಕತೆ, ಸಾಂಸ್ಕೃತಿಕ ಮತ್ತು ಸಾಮಾಜಿಕ ಹಾಗೂ ಇಂಧನ ವಲಯಗಳ ಪರಸ್ಪರ ಸಹಕಾರ ಮತ್ತು ಬಾಂಧವ್ಯ ವೃದ್ಧಿಯನ್ನು ಕೋರಲಿದ್ದಾರೆ. ನಂತರ ಮೋದಿಯವರು ಅಲ್ಲಿರುವ ಭಾರತೀಯರನ್ನುದ್ದೇಶಿಸಿ ಮಾತನಾಡಲಿದ್ದಾರೆ.
ಇಂದು ಅವರು ಯುನೈಟೆಡ್ ಅರಬ್ ಎಮಿರೇಟ್ಸ್ ನ ರಾಜಧಾನಿ ಅಬು ದಾಬಿಗೆ ತಲುಪಲಿದ್ದು, ನಾಳೆ ದುಬೈಗೆ ತೆರಳಲಿದ್ದಾರೆ.