ಮುಂಬೈ: ಭ್ರಷ್ಟಾಚಾರ ಪ್ರಕರಣ ಸಂಬಂಧ ಮಹಾರಾಷ್ಟ್ರ ನ್ಯಾಷನಲ್ ಕಾಂಗ್ರೆಸ್ ಪಕ್ಷ(ಎನ್‌ಸಿಪಿ)ದ ಶಾಸಕ ರಮೇಶ್ ಕದಂ ಅವರನ್ನು ಸೋಮವಾರ ಸಿಐಡಿ ಪೊಲೀಸರು ಬಂಧಿಸಿದ್ದಾರೆ.
ಪುಣೆ-ಅಹ್ಮದ್ ನಗರ ರಸ್ತೆ ಸಮೀಪದ ಫೈವ್ ಸ್ಟಾರ್ ಹೋಟೆಲ್ ನಲ್ಲಿದ್ದ ಕದಂ ಅವರನ್ನು ಸಿಐಡಿ ಅಧಿಕಾರಿಗಳು ಇಂದು ಬೆಳಗ್ಗೆ ವಶಕ್ಕೆ ಪಡೆದಿದ್ದಾರೆ ಎಂದು ವರದಿಗಳು ತಿಳಿಸಿವೆ.
ಸರ್ಕಾರಿ ಸ್ವಾಮಿತ್ವದ ಅನ್ನಾಭಾವೋ ಸಾಠೆ ಡೆವಲಪ್ ಮೆಂಟ್ ಕಾರ್ಪೋರೇಶನ್ ನ ಅಧ್ಯಕ್ಷರಾಗಿರುವ ಕದಂ ಅವರು, ಸುಮಾರು 141 ಕೋಟಿ ರುಪಾಯಿ ಅವ್ಯವಹಾರ ನಡೆಸಿದ ಆರೋಪ ಎದುರಿಸುತ್ತಿದ್ದಾರೆ.
ಹಗರಣ ಸಂಬಂಧ ಸಿಐಡಿ ಅಧಿಕಾರಿಗಳು ಕೇಸ್ ದಾಖಲಿಸಿಕೊಂಡು ಹುಡುಕಾಟ ಆರಂಭಿಸಿದ್ದರು. ಇಂದು ಬೆಳಗ್ಗೆ ಕದಂ ಅವರನ್ನು ಬಂಧಿಸಿ ಹೆಚ್ಚಿನ ವಿಚಾರಣೆಗಾಗಿ ನವಿ ಮುಂಬೈಗೆ ಕರೆ ತಂದಿರುವುದಾಗಿ ಸಿಐಡಿ ಅಧಿಕಾರಿಗಳು ತಿಳಿಸಿದ್ದಾರೆ.
ಸೋಲಾಪುರದ ಮೋಹೋಲ್ ಕ್ಷೇತ್ರದ ಎನ್ ಸಿಪಿ ಶಾಸಕರಾಗಿರುವ ಕದಂ ಅವರ ವಿರದ್ಧ ಕಳೆದ ವರ್ಷವೇ ಕಾಂಗ್ರೆಸ್, ಎನ್‌ಸಿಪಿ ಮೈತ್ರಿಕೂಟದ ಸರ್ಕಾರ ಇದ್ದಾಗಲೇ ತನಿಖೆ ಆರಂಭವಾಗಿತ್ತು. ಇದೀಗ ಬಿಜೆಪಿ ನೇತೃತ್ವದ ಸರ್ಕಾರ ಪ್ರಕರಣವನ್ನು ಸಿಐಡಿಗೆ ಹಸ್ತಾಂತರಿಸಿತ್ತು.