ಪಣಜಿ: ಲೂಯಿಸ್ ಬರ್ಗರ್ ಸಂಸ್ಥೆ ಲಂಚ ಪ್ರಕರಣದಲ್ಲಿ ಗೋವಾ ಮಾಜಿ ಮುಖ್ಯಮಂತ್ರಿ ದಿಗಂಬರ್ ಕಾಮತ್ ಗೆ ಭ್ರಷ್ಟಾಚಾರ ನಿಯಂತ್ರಣ ವಿಶೇಷ ಕೋರ್ಟ್ ನಿಂದ ನಿರೀಕ್ಷಣಾ ಜಾಮೀನು ಸಿಕ್ಕಿದೆ.
ಬಹುಕೋಟಿಯ ಜಲಾಭಿವೃದ್ಧಿ ಯೋಜನೆ ಗುತ್ತಿಗೆ ಪಡೆಯಲು ಲೂಯಿಸ್ ಬರ್ಗರ್ ಸಂಸ್ಥೆಯಿಂದ ಲಂಚ ಸ್ವೀಕರಿಸಿದ್ದ ಆರೋಪ ಎದುರಿಸುತ್ತಿದ್ದ ದಿಗಂಬರ್ ಕಾಮತ್ ಅವರ ನಿರೀಕ್ಷಣಾ ಜಾಮೀನು ಅರ್ಜಿ ವಿಚಾರಣೆ ನಡೆಸಿ ಷರತ್ತು ಬದ್ಧ ನಿರೀಕ್ಷಣಾ ಜಾಮೀನು ನೀಡಲಾಗಿದೆ. ಪ್ರಕರಣದದಲ್ಲಿ ಬಂಧನಕ್ಕೊಳಗಾಗುವ ಭೀತಿ ಎದುರಿಸುತ್ತಿರುವುದರಿಂದ ಕಾಮತ್ ನಿರೀಕ್ಷಣಾ ಜಾಮೀನು ಸಲ್ಲಿಸಿದ್ದರು. ಒಂದು ಲಕ್ಷದ ಶೂರಿಟಿ ನೀಡಬೇಕು ಎಂದು ಕೋರ್ಟ್ ನಿರ್ದೇಶನ ನೀಡಿದೆ.
ಪ್ರಕರಣದ ಬಗ್ಗೆ ತನಿಖೆ ನಡೆಸುತ್ತಿರುವ ಕ್ರೈಂ ಬ್ರಾಂಚ್ ಅಧಿಕಾರಿಗಳು ದಿಗಂಬರ್ ಕಾಮತ್ ಅವರನ್ನು ಎರಡು ಬಾರಿ ವಿಚಾರಣೆಗೊಳಪಡಿಸಿದ್ದಾರೆ. ವಿಚಾರಣೆ ಬಳಿಕ ತನಿಖಾಧಿಕಾರಿಗಳು ಕಾಮತ್ ವಿರುದ್ಧ ಸಾಕ್ಷ್ಯ ನಾಶ ಮಾಡಿರುವ ಆರೋಪದಡಿ ಹೆಚ್ಚುವರಿ ಚಾರ್ಜ್ ಶೀಟ್ ದಾಖಲಿಸಿದ್ದರು. ವಿದೇಶಿ ಕಂಪನಿಯಿಂದ ಲಂಚ ಪಡೆದಿರುವ ಹಿನ್ನೆಲೆಯಲ್ಲಿ ಗೋವಾ ಮಾಜಿ ಮುಖ್ಯಮಂತ್ರಿ ವಿರುದ್ಧ ಐಪಿಸಿ ಸೆಕ್ಷನ್ 120 -ಬಿ ಅಡಿ ಕ್ರಿಮಿನಲ್ ಸಂಚು, ಭ್ರಷ್ಟಾಚಾರ ತಡೆ ಕಾಯ್ದೆಯ ಸೆಕ್ಷನ್ 7 ,8 ,9 , 13 ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.