ನವದೆಹಲಿ: ಹಣ ದುರುಪಯೋಗ ಮತ್ತು ಹಲವಾರು ಅಕ್ರಮಗಳ ಆರೋಪ ಎದುರಿಸುತ್ತಿರುವ ಐಪಿಎಲ್ ಮಾಜಿ ಮುಖ್ಯಸ್ಥ ಲಲಿತ್ ಮೋದಿ ವಿರುದ್ಧದ ರೆಡ್ ಕಾರ್ನರ್ ನೊಟೀಸನ್ನು ಅನುಷ್ಠಾನಿಸುವಂತೆ ಸಿಬಿಐ ಗುರುವಾರ ಇಂಟರ್‌ಪೋಲ್‌ಗೆ ದಾಖಲೆಪತ್ರಗಳನ್ನು ಕಳುಹಿಸಿದೆ.
ಲಲಿತ್ ಮೋದಿಗೆ ಸಂಬಂಧಿಸಿದ ದಾಖಲೆ ಪತ್ರಗಳ ಪರಿಶೀಲನೆ ಹಾಗೂ ಕಾನೂನು ಅವಲೋಕನೆ ನಡೆಸಿದ ನಂತರ ಅವುಗಳನ್ನು ಸಿಬಿಐ ಇಂಟರ್‌ಪೋಲ್ ಗೆ ಕಳುಹಿಸಿದೆ.
ರೆಡ್ ಕಾರ್ನರ್ ನೊಟೀಸಿನಿಂದಾಗಿ ಲಲಿತ್ ಮೋದಿಯ ವಿರುದ್ಧ ಆರೋಪವನ್ನು ಬಲಗೊಳಿಸಲು ಸರಕಾರಕ್ಕೆ ಅನುಕೂಲವಾಗಲಿದೆ. ಜಾರಿ ನಿರ್ದೇಶನಾಲಯಕ್ಕೆ ಕೂಡ ಲಲಿತ್ ಮೋದಿ ಬೇಕಾಗಿರುವ ವ್ಯಕ್ತಿಯಾಗಿದ್ದಾರೆ.
ಹಣ ದುರುಪಯೋಗ ಮತ್ತು ವಿದೇಶೀ ವಿನಿಮಯ ನಿರ್ವಹಣ ಕಾಯಿದೆಯಡಿ ಲಲತ್ ಮೋದಿ ಸುಮಾರು ಹದಿನಾರು ಉಲ್ಲಂಘನೆಗಳನ್ನು ಎಸಗಿದ್ದು ಜಾರಿ ನಿರ್ದೇಶನಾಲಯವು ಆ ಪ್ರಕರಣಗಳ ತನಿಖೆಯನ್ನು ನಡೆಸುತ್ತಿದೆ. ಇವುಗಳಲ್ಲಿ ಹೆಚ್ಚಿನವು ಐಪಿಎಲ್ ಅಕ್ರಮಗಳಿಗೆ ಸಂಬಂಧಿಸಿವೆ.
ಲಲಿತ್ ಮೋದಿ ವಿರುದ್ಧ ವಿಶೇಷ ನ್ಯಾಯಾಲಯವು ಜಾಮೀನು ರಹಿತ ವಾರೆಂಟ್ ಹೊರಡಿಸಿರುವ ನೆಲೆಯಲ್ಲಿ ಆತನ ವಿರುದ್ಧ ರೆಡ್ ಕಾರ್ನರ್ ನೊಟೀಸನ್ನು ಹೊರಡಿಸಬೇಕೆಂದು ಜಾರಿ ನಿರ್ದೇಶನಾಲಯ ಮುಂಬಯಿ ಘಟಕವು ಸಿಬಿಐ ಅನ್ನು ಸಂಪರ್ಕಿಸಿತ್ತು.