ಇಸ್ಲಾಮಾಬಾದ್: ಪಾಕ್ ಭದ್ರತಾ ಸಲಹೆಗಾರ ಸರ್ತಾಜ್ ಅಜೀಜ್ ಅವರು ಹುರಿಯತ್ ಪ್ರತ್ಯೇಕತಾವಾದಿಗಳನ್ನು ಭೇಟಿ ಮಾಡಬಾರದೆಂಬ ಭಾರತದ ಸೂಚನೆಗೆ ಪಾಕಿಸ್ತಾನ ಪ್ರತಿಕ್ರಿಯಿಸಿದ್ದು, ಭಾರತದ ಉಪದೇಶ ಕೇಳಲು ಸಿದ್ಧವಿಲ್ಲ ಎಂದು ತಿರುಗೇಟು ನೀಡಿದೆ.
ಷರತ್ತು ಬದ್ಧ ಎನ್ಎಸ್ಎ ಸಭೆಗೆ ವಿರೋಧ ವ್ಯಕ್ತಪಡಿಸಿರುವ ಪಾಕಿಸ್ತಾನ, ತಾನು ಕಾಶ್ಮೀರಿ ಪ್ರತ್ಯೇಕತಾವಾದಿಗಳೊಂದಿಗೆ ಮಾತುಕತೆ ನಡೆಸುವುದಾಗಿ ಸ್ಪಷ್ಟಪಡಿಸಿದೆ. ಆದರೆ ಇದಕ್ಕೆ ವಿರೋಧ ವ್ಯಕ್ತಪಾಡಿಸಿರುವ ಭಾರತ ಸರ್ಕಾರ, ಪಾಕಿಸ್ತಾನದ ನಡೆಯಿಂದ ಸೌಹಾರ್ದಯುತ ದ್ವಿಪಕ್ಷೀಯ ಸಂಬಂಧ ಮುಂದುವರೆಯುವುದಿಲ್ಲ ಎಂದು ಎಚ್ಚರಿಕೆ ನೀಡಿದೆ.
ಆಗಸ್ಟ್ 23 ರಂದು ಸರ್ತಾಜ್ ಅಜೀಜ್ - ಅಜಿತ್ ದೋವಲ್ ಮಾತುಕತೆ ನಡೆಯಲಿದೆ, ಆದರೆ ತನ್ನ ಹಳೆ ಚಾಳಿಯನ್ನೇ ಮುಂದುವರೆಸಿರುವ ಪಾಕಿಸ್ತಾನ, ಸರ್ತಾಜ್ ಅಜೀಜ್ ಅವರನ್ನು ಭೇಟಿ ಮಾಡಲು ಕಾಶ್ಮೀರಿ ಪ್ರತ್ಯೇಕತಾವಾದಿಗಳಿಗೆ ಆಹ್ವಾನ ನೀಡಿತ್ತು. ಪಾಕಿಸ್ತಾನದ ತನ್ನ ಉದ್ಧಟತನ ಮುಂದುವರೆಸಿರುವ ಹಿನ್ನೆಲೆಯಲ್ಲಿ ಭಾರತ ಸರ್ಕಾರ ಪ್ರತ್ಯೇಕತಾವಾದಿಗಳನ್ನು ಮತ್ತೊಮ್ಮೆ ಗೃಹಬಂಧನದಲ್ಲಿರಿಸಿದೆ.