ದೇಶ

ನಾಳೆ ದೇಶಾದ್ಯಂತ ಯುಪಿಎಸ್ ಸಿ ಪೂರ್ವಭಾವಿ ಪರೀಕ್ಷೆ

Sumana Upadhyaya

ನವದೆಹಲಿ: ಕೇಂದ್ರ ಲೋಕ ಸೇವಾ ಆಯೋಗದ(ಯುಪಿಎಸ್ ಸಿ) ಪೂರ್ವಭಾವಿ ಪರೀಕ್ಷೆ ದೇಶಾದ್ಯಂತ ನಾಳೆ ನಡೆಯಲಿದ್ದು, ಲಕ್ಷಾಂತರ ಮಂದಿ ಅಭ್ಯರ್ಥಿಗಳು ಪರೀಕ್ಷೆಗೆ ಹಾಜರಾಗಲಿದ್ದಾರೆ. ಈ ವರ್ಷ ದೇಶದ 71 ಕೇಂದ್ರಗಳ 2 ಸಾವಿರ ಸ್ಥಳಗಳಲ್ಲಿ ಪರೀಕ್ಷೆ ನಡೆಯಲಿದ್ದು, 9 ಲಕ್ಷದ 45 ಸಾವಿರದ 908 ಅಭ್ಯರ್ಥಿಗಳು ಪರೀಕ್ಷೆ ಬರೆಯಲು ಅರ್ಜಿ ಸಲ್ಲಿಸಿದ್ದಾರೆ.

ಭಾರತೀಯ ಆಡಳಿತ ಸೇವೆ, ಭಾರತೀಯ ವಿದೇಶ ಸೇವೆ ಮತ್ತು ಭಾರತೀಯ ಪೊಲೀಸ್ ಸೇವೆಗೆ ನೇಮಕಾತಿ ಬಯಸಿ ಪ್ರತಿ ವರ್ಷ ಮೂರು ಹಂತಗಳಲ್ಲಿ ಯುಪಿಎಸ್ ಸಿ ಪರೀಕ್ಷೆ ನಡೆಸುತ್ತದೆ. ಪೂರ್ವಭಾವಿ, ಮುಖ್ಯ ಪರೀಕ್ಷೆ ಮತ್ತು ಸಂದರ್ಶನ ಹೀಗೆ ಮೂರು ಹಂತಗಳಲ್ಲಿ ಇರುತ್ತದೆ.

ಪ್ರವೇಶ ಪತ್ರ: ಯುಪಿಎಸ್ ಸಿ ಅಧಿಕೃತ ವೆಬ್ ಸೈಟ್ http://www.upsc.gov.in ಗೆ ಲಾಗಿನ್ ಆಗಿ ಅಲ್ಲಿ ತೋರಿಸುವ ''ಇ-ಅಡ್ಮಿಟ್ ಕಾರ್ಡ್-ಸಿವಿಲ್ ಸರ್ವಿಸ್ ಎಕ್ಸಾಮಿನೇಶನ್, 2015'' ಎಂಬ ಲಿಂಕ್ ಗೆ ಕ್ಲಿಕ್ ಮಾಡಿ ಅಲ್ಲಿ ರೋಲ್ ನಂಬರ್ ನ್ನು ಹಾಕಿದರೆ ಪ್ರವೇಶ ಪತ್ರ ಸಿಗುತ್ತದೆ.

2011ರಲ್ಲಿ ಪರೀಕ್ಷೆ ತೆಗೆದುಕೊಳ್ಳದವರಿಗೆ ಮತ್ತೊಂದು ಚಾನ್ಸ್: 2011ರಲ್ಲಿ ಅರ್ಜಿ ಸಲ್ಲಿಸಿ  ಆ ವರ್ಷ ಸಿಎಸ್ ಎಟಿ(Civil Services Aptitude Test) ಜಾರಿಯಿಂದ ಪರೀಕ್ಷೆ ತೆಗೆದುಕೊಳ್ಳದವರಿಗೆ ಕೇಂದ್ರ ಆಡಳಿತ ಪ್ರಾಧಿಕಾರ ಮತ್ತೊಂದು ಅವಕಾಶ ನೀಡುತ್ತಿದೆ. ಈ ಬಾರಿ ಪೂರ್ವಭಾವಿ ಪರೀಕ್ಷೆ ತೆಗೆದುಕೊಳ್ಳಲು ಅವಕಾಶ ಕಲ್ಪಿಸುತ್ತಿದೆ.

2011ರಲ್ಲಿ, ಪರೀಕ್ಷೆಗೆ ಅರ್ಜಿ ಸಲ್ಲಿಸಿದ್ದ ಒಟ್ಟು 4 ಲಕ್ಷದ 72 ಸಾವಿರದ 290 ಅಭ್ಯರ್ಥಿಗಳ ಪೈಕಿ 2 ಲಕ್ಷದ 43 ಸಾವಿರದ 3 ಅಭ್ಯರ್ಥಿಗಳು ಹಾಜರಾಗಿದ್ದರು.

SCROLL FOR NEXT