ನವದೆಹಲಿ: ಎನ್ಎಸ್ಎ ಮಾತುಕತೆ ರದ್ದುಗೊಂಡಿರುವುದಕ್ಕೆ ಪ್ರತ್ಯೇಕತಾವಾದಿಗಳು ಮಾತ್ರ ಭಾರತ ಸರ್ಕಾರದ ವಿರುದ್ಧ ಆರೋಪ ಹೊರಿಸುತ್ತಿಲ್ಲ. ಈಗ ಕಾಂಗ್ರೆಸ್ ಸಹ ಭಾರತ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದು, ಮಾತುಕತೆ ಸಂಬಂಧ ಪಾಕಿಸ್ತಾನ ರಚಿಸಿದ್ದ ವ್ಯೂಹಕ್ಕೆ ಭಾರತ ಬಲಿಯಾಗಿದೆ ಎಂದು ಟೀಕಿಸಿದೆ.
ಪ್ರಧಾನಿ ನರೇಂದ್ರ ಮೋದಿ ಸರ್ಕಾರ ಎನ್ಎಸ್ಎ ಮಾತುಕತೆ ನಿಗದಿಗೂ ಮುನ್ನ ಸರಿಯಾದ ತಯಾರಿ ನಡೆಸಿರಲಿಲ್ಲ, ಮಾತುಕತೆ ವೇಳೆ ಚರ್ಚೆಯಾಗಬೇಕಿದ್ದ ವಿಷಯಗಳ ಬಗ್ಗೆ ಕೇಂದ್ರ ಸರ್ಕಾರ ಗಮನವನ್ನು ಕೇಂದ್ರೀಕರಿಸಲಿಲ್ಲ ಎಂದು ಕಾಂಗ್ರೆಸ್ ವಕ್ತಾರ ಅಭಿಷೇಕ್ ಮನು ಸಿಂಘ್ವಿ ಆರೋಪಿಸಿದ್ದಾರೆ.
ಭಯೋತ್ಪಾದನೆ ವಿಷಯವನ್ನು ಚರ್ಚಿಸುವುದರಿಂಡ ಪಲಾಯನ ಮಾಡುವುದಕ್ಕೆ ಈಗ ಭಾರತ ಸರ್ಕಾರವೇ ಪಾಕಿಸ್ತಾನಕ್ಕೆ ಅವಕಾಶ ಮಾಡಿಕೊಟ್ಟಂತಾಗಿದೆ. ಎನ್ಎಸ್ಎ ಸಭೆಗೂ ಮುನ್ನ ಮೋದಿ ಸರ್ಕಾರ ಸರಿಯಾದ ತಯಾರಿ ನಡೆಸದೆ ಇರುವುದು ದುರದೃಷ್ಟಕರ ಎಂದು ಸಿಂಘ್ವಿ ಹೇಳಿದ್ದಾರೆ. ಪಾಕಿಸ್ತಾನ ತನ್ನ ಸಂಚಿನಲ್ಲಿ ಯಶಸ್ವಿಯಾಗದಂತೆ ಭಾರತ ಪೂರ್ವ ತಯಾರಿ ನಡೆಸಿಕೊಳ್ಳಬೇಕಿತ್ತು, ಪಾಕಿಸ್ತಾನ- ಭಾರತದ ಎನ್ಎಸ್ಎ ಸಭೆ ರದ್ದುಗೊಂಡಿದ್ದು ಭಾರತೀಯ ವಿದೇಶಾಂಗ ನೀತಿಯ ದೃಷ್ಟಿಯಿಂದ ಉತ್ತಮ ಬೆಳವಣಿಗೆಯಲ್ಲ ಎಂದು ಸಿಂಘ್ವಿ ಅಭಿಪ್ರಾಯಪಟ್ಟಿದ್ದಾರೆ.