ನವದೆಹಲಿ: ಬಾಲಿವುಡ್ ಹಿರಿಯ ನಟ ಹಾಗೂ ಬಿಜೆಪಿ ಸಂಸದ ಶತೃಘ್ನ ಸಿನ್ಹಾ ತಮ್ಮ ಪಕ್ಷದ ನಾಯಕರ ವಿರುದ್ಧವೇ ಗುಡುಗಿದ್ದಾರೆ. ಪ್ರತಿಯೊಂದು ಕ್ರಿಯೆಯೂ ಅದಕ್ಕೆ ಸಮನಾದ ಹಾಗೂ ವಿರುದ್ಧವಾದ ಪ್ರತಿಕ್ರಿಯೆಯನ್ನು ಹೊಂದಿರುತ್ತದೆ ಎಂದು ವಾಗ್ದಾಳಿ ನಡೆಸಿದ್ದಾರೆ.
ಶತೃಘ್ನ ಸಿನ್ಹಾ, ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರ ಸಾಮೀಪ್ಯ ಬೆಳೆಸುತ್ತಿರುವುದರ ಹಿನ್ನೆಲೆಯಲ್ಲಿ ಪಕ್ಷ ಸಿನ್ಹಾ ವಿರುದ್ಧ ಶಿಸ್ತುಕ್ರಮ ಜರುಗಿಸಲು ಸಿದ್ಧತೆ ನಡೆಸುತ್ತಿದೆ. ಪಕ್ಷ ಯಾವುದೇ ಶಿಸ್ತು ಕ್ರಮ ಕೈಗೊಂಡರು ಅದನ್ನು ಎದುರಿಸಲು ಸಿದ್ಧವಿರುವುದಾಗಿ ಶತೃಘ್ನ ಸಿನ್ಹಾ ಖಾರವಾಗಿ ತಮ್ಮ ಟ್ವೀಟರ್ ನಲ್ಲಿ ಪ್ರತಿಕ್ರಿಯಿಸಿದ್ದಾರೆ.
ಇನ್ನೂ ಶತೃಘ್ನ ಸಿನ್ಹಾ ವಿರುದ್ಧದ ಶಿಸ್ತು ಕ್ರಮ ವಿಷಯವಾಗಿ ಬಿಜೆಪಿ ಎಲ್ಲಯೂ ಅಧಿಕೃತವಾಗಿ ಪ್ರಕಟಿಸಿಲ್ಲ, ಶತೃಘ್ನ ಸಿನ್ಹಾ ನಿತೀಶ್ ಕುಮಾರ್ ಅವರ ಸ್ನೇಹಿತರಾಗಿದ್ದು , ಇತ್ತೀಚಿನ ದಿನಗಳಲ್ಲಿ ಶತೃಘ್ನ ಸಿನ್ಹಾ ನಿತೀಶ್ ಕುಮಾರ್ ಅವರನ್ನ ಹಾಡಿ ಹೊಗಳಿದ್ದರು. ಇದರ ಜೊತೆಗೆ ನಿತೀಶ್ ಸರ್ಕಾರ ಪಾಟ್ನಾದಲ್ಲಿ ಸ್ಥಾಪಿಸಿರುವ ಆರೋಗ್ಯ ಮತ್ತು ದೈಹಿಕ ಶಿಕ್ಷಣ ಕಾಲೇಜಿಗೆ ಶತೃಘ್ನ ಸಿನ್ಹಾ ಅವರ ತಂದೆಯ ಹೆಸರನ್ನು ನಾಮಕರಣ ಮಾಡಿದೆ. ಈ ಎಲ್ಲಾ ಬೆಳವಣಿಗೆಗಳು ಬಿಜೆಪಿಗೆ ಇರುಸು ಮುರುಸು ಉಂಟು ಮಾಡಿದ್ದವು.