ಪಾಟ್ನಾ: ಕಳೆದ ವಾರವಷ್ಟೇ ಪ್ರಧಾನಿ ಮೋದಿ ಅವರ ಬಗ್ಗೆ ಹಾಸ್ಯ ಮಾಡಿದ್ದ ಆರ್ ಜೆಡಿ ಮುಖ್ಯಸ್ಥ ಲಾಲೂ ಪ್ರಸಾದ್ ಯಾದವ್ ತನ್ನ ಬಳಿ ಪರಮಾಣು ಬಾಂಬ್ ಇದೆ ಎಂದು ಭಾರತಕ್ಕೆ ಪಾಕಿಸ್ತಾನ ಬೆದರಿಕೆ ಒಡ್ಡಿರುವುದಕ್ಕೆ ಎಂದಿನಂತೆ ಹಾಸ್ಯಾತ್ಮಕವಾಗಿ ಪ್ರತಿಕ್ರಿಯಿಸಿದ್ದಾರೆ.
'ಪಾಕಿಸ್ತಾನದ ಬಳಿ ಪರಮಾಣುವಿದ್ದರೇನು? ಭಾರತದ ಬಳಿ ಲಾಲು ಬಾಂಬ್ ಇದೆ' ಎಂದಿದ್ದಾರೆ.ಪಾಕಿಸ್ತಾನದ ರಾಷ್ಟ್ರೀಯ ಭದ್ರತಾ ಸಲಹಾಗಾರ ಸತ್ರಾಜ್ ಅಜೀಜ್ ನಮ್ಮದು ಪರಮಾಣು ಹೊಂದಿರುವ ರಾಷ್ಟ್ರ ಎಂದು ಹೇಳುವ ಮೂಲಕ ಭಾರತಕ್ಕೆ ಒಡ್ಡಿರುವ ಬೆದರಿಕೆಯ ಕುರಿತು ಲಾಲು ಪ್ರಸಾದ್ ಯಾದವ್ ಬಳಿ ಪ್ರತಿಕ್ರಿಯೆ ಕೇಳಿದಾಗ, "ಒಂದೊಮ್ಮೆ ತಾವು ಭಾರತದ ಪ್ರಧಾನಿಯಾದರೆ ಪಾಕ್ ಲಾಲು ಬಾಂಬ್‌ನ್ನು ಎದುರಿಸಬೇಕಾಗುತ್ತದೆ", ಎಂದು ತಾವು ಪಾಕ್‌ಗೆ ಸಮರ್ಥ ಉತ್ತರ ನೀಡಲು ಸಮರ್ಥರು ಎಂದು ಪರೋಕ್ಷವಾಗಿ ಹೇಳಿದ್ದಾರೆ.
ಪ್ರಧಾನಿ ಮೋದಿ ನೇತೃತ್ವದ ಸರ್ಕಾರ ಸಮರ್ಥ ಆಡಳಿತ ನೀಡುವಲ್ಲಿ ವಿಫಲವಾಗಿದೆ. ಇದು ಉದ್ಯಮಿಗಳ ಸರ್ಕಾರ, ದೇಶವನ್ನು ರಕ್ಷಿಸಲು ಇವರಿಂದ ಸಾಧ್ಯವಿಲ್ಲ ಎಂದು ಅವರು ವ್ಯಂಗ್ಯವಾಡಿದ್ದಾರೆ.
ಕಾಶ್ಮೀರ ಪ್ರತ್ಯೇಕತಾವಾದಿಗಳ ಜೊತೆಗಿನ ಮಾತುಕತೆ ಹಾಗೂ ಕಾಶ್ಮೀರ ವಿಷಯ ಬಿಟ್ಟು ಮಾತುಕತೆಗೆ ಬನ್ನಿ ಎಂದು ಪಾಕ್‌ಗೆ ಭಾರತ ಷರತ್ತು ವಿಧಿಸಿದ ಹಿನ್ನೆಲೆಯಲ್ಲಿ ಪಾಕ್ ಭಾರತದೊಂದಿಗಿನ ಮಾತುಕತೆಯನ್ನು ರದ್ದುಪಡಿಸಿತ್ತು. ಕಾಶ್ಮೀರ ಪ್ರತ್ಯೇಕತಾವಾದಿಗಳನ್ನು ಪಾಕ್ ಮಾತುಕತೆಗೆ ಆಹ್ವಾನಿಸಿದ್ದು, ಉಭಯ ದೇಶಗಳ ಮಧ್ಯದ ಮಾತುಕತೆ ರದ್ದಾಗಲು ಕಾರಣವಾಯಿತು.