ನವದೆಹಲಿ: ನಿವೃತ್ತ ಯೋಧರ ನಿಯೋಗ ಕೇಂದ್ರ ಗೃಹ ಸಚಿವ ರಾಜನಾಥ್ ಸಿಂಗ್ ಅವರನ್ನು ಭೇಟಿ ಮಾಡಿದ್ದು ಶೀಘ್ರವೇ ಒನ್ ರ್ಯಾಂಕ್ ಒನ್ ಪೆನ್ಷನ್ ಯೋಜನೆಯನ್ನು ಜಾರಿಗೊಳಿಸುವಂತೆ ಒತ್ತಾಯಿಸಿದ್ದಾರೆ.
ರಾಜನಾಥ್ ಸಿಂಗ್ ಅವರಿಗೆ ಪತ್ರ ನೀಡಿರುವ ನಿವೃತ್ತ ಯೋಧರು, ಒಆರ್ ಒಪಿಗೆ ಆಗ್ರಹಿಸುತ್ತಿರುವ ಯೋಧರ ಬೇಡಿಕೆಗೆ ನ್ಯಾಯ ಒದಗಿಸುವಂತೆ ಮನವಿ ಮಾಡಿದ್ದಾರೆ. ಕೇಂದ್ರ ಸರ್ಕಾರ ತಾತ್ವಿಕವಾಗಿ ಒಆರ್ ಒಪಿ ಜಾರಿಗೆ ಅನುಮತಿ ನೀಡಿದೆ. ಯೋಜನೆ ಜಾರಿಗೆ ಅಗತ್ಯವಿರುವ ಕೆಲಸ ನಡೆಯುತ್ತಿದೆ ಎಂದು ರಾಜನಾಥ್ ಸಿಂಗ್ ನಿಯೋಗದ ಸದಸ್ಯರಿಗೆ ತಿಳಿಸಿದ್ದಾರೆ.
ಒಆರ್ ಒಪಿ ಜಾರಿಗೆ ಆಗ್ರಹಿಸಿ ನಿವೃತ್ತ ಸೈನಿಕರು ಕಳೆದ ಎರಡು ತಿಂಗಳಿಂದ ಪ್ರತಿಭಟನೆ ನಡೆಸುತ್ತಿದ್ದಾರೆ. ಇದಕ್ಕೂ ಮುನ್ನ ಪ್ರತಿಕ್ರಿಏ ನೀಡಿದ್ದ ರಕ್ಷಣಾ ಸಚಿವ ಮನೋಹರ್ ಪರಿಕ್ಕರ್ ಒಆರ್ ಒಪಿ ಜಾರಿಗೆ ಎದುರಾಗಿರುವ ಸಣ್ಣ ಅಡೆತಡೆಗಳನ್ನು ಕೇಂದ್ರ ಸರ್ಕಾರ ಸರಿಪಡಿಸುತ್ತಿದ್ದು ಶೀಘ್ರವೇ ಜಾರಿಯಾಗಲಿದೆ ಎಂದು ಭರವಸೆ ನೀಡಿದ್ದರು.