ನವದೆಹಲಿ: ಭಾರತದ ಸಂವಿಧಾನವು ನೀಡಿರುವ `ಬದುಕುವ ಹಕ್ಕು' ನಮ್ಮ ದೇಶದಲ್ಲಿ ಅತಿ ಹೆಚ್ಚು ಉಲ್ಲಂಘನೆಯಾಗುತ್ತಿರುವ ಹಕ್ಕಾಗಿದೆ. ಸರ್ಕಾರದ ಸಂಸ್ಥೆಗಳಿಂದ ಅಥವಾ ಮಾನವ ಹಕ್ಕು ಉಲ್ಲಂಘನೆ ತಡೆಯುವಲ್ಲಿ ಸಂಸ್ಥೆಗಳು ತೋರಿಸಿದ ನಿರ್ಲಕ್ಷ್ಯದಿಂದ 2004-2014ರ ಅವಧಿ ಯಲ್ಲಿ ಬರೋಬ್ಬರಿ 1.30 ಲಕ್ಷ ಮಂದಿ ಪ್ರಾಣ ಕಳೆದುಕೊಂಡಿದ್ದಾರೆ.
ಏಷ್ಯನ್ ಸೆಂಟರ್ ಆಫ್ ಹ್ಯೂಮನ್ ರೈಟ್ಸ್(ಎಸಿಎಚ್ಆರ್) ಬಹಿರಂಗಪಡಿಸಿರುವ ವರದಿಯು ಈ ಆಘಾತಕಾರಿ ಅಂಶವನ್ನು ಹೊರಹಾಕಿದೆ. `ಭಾರತದಲ್ಲಿ ಬದುಕುವ ಹಕ್ಕಿನ ಸ್ಥಿತಿಗತಿ' ಎಂಬ ಶೀರ್ಷಿಕೆಯಡಿ ಪ್ರಕಟವಾದ ವರದಿಯು ಮಾನವ ಹಕ್ಕು ಉಲ್ಲಂಘನೆಯ ಗಂಭೀರ ಸತ್ಯವನ್ನು ಬಿಚ್ಚಿಟ್ಟಿದೆ. 10 ವರ್ಷಗಳ ಅವಧಿಯಲ್ಲಿ ಭಾರತದಲ್ಲಿ ಈ ರೀತಿ ಸಾವಿಗೀಡಾದವರಲ್ಲಿ ಅತಿ ಹೆಚ್ಚು ಮಹಿಳೆಯರು(80,947) ಸೇರಿದ್ದಾರೆ.
ಭಾರತದಲ್ಲಿ ಪ್ರತಿ ತಿಂಗಳು ಸರಾಸರಿ 1,086 ಮಂದಿಯ ಬದುಕುವ ಹಕ್ಕನ್ನು ಉಲ್ಲಂಘಿಸಲಾಗುತ್ತಿದೆ ಎಂದೂ ವರದಿ ಹೇಳಿದೆ. ಈ ವಿಚಾರದಲ್ಲಿ ಅಧ್ಯಯನ ಕೈಗೊಂಡು ವರದಿ ನೀಡಿರುವುದು ಇದೇ ಮೊದಲು ಎಂದು ಎಸಿಎಚ್‍ಆರ್ ನಿರ್ದೇಶಕ ಸುಹಾಸ್ ಚಕ್ಮಾ ತಿಳಿಸಿದ್ದಾರೆ. ನಾಗರಿಕರ ಬದುಕುವ ಹಕ್ಕನ್ನು ರಕ್ಷಿಸುವಲ್ಲಿ ಸರ್ಕಾರಗಳ ವೈಫಲ್ಯವನ್ನೂ ವರದಿಯಲ್ಲಿ ಉಲ್ಲೇಖಿಸಲಾಗಿದೆ.
ಯಾವಾಗ ಜನರ ಮನಸ್ಸಲ್ಲಿ ಶಿಕ್ಷೆಯ ಭಯ ಮೂಡುವುದಿಲ್ಲವೋ, ಅಲ್ಲಿಯವರೆಗೆ ಬದುಕುವ ಹಕ್ಕಿನ ಉಲ್ಲಂಘನೆಯನ್ನು ಪರಿಣಾಮಕಾರಿಯಾಗಿ ಕಡಿಮೆ ಮಾಡಲು ಸಾಧ್ಯವಿಲ್ಲ.
- ಸುಹಾಸ್ ಚಕ್ಮಾ, ಎಸಿಎಚ್‍ಆರ್ ನಿರ್ದೇಶಕ