ಅಹಮದಾಬಾದ್: ಕಳೆದ ಎರಡು ದಿನಗಳಿಂದ ಪಟೇಲ್ ಸಮುದಾಯದ ಮೀಸಲು ಗಲಾಟೆಯಿಂದಾಗಿ ಉದ್ವಿಗ್ನವಾಗಿದ್ದ ಗುಜರಾತ್ ಶುಕ್ರವಾರ ಸಹಜ ಸ್ಥಿತಿಗೆ ಮರಳಿದೆ.
ಬುಧವಾರ ರಾತ್ರಿಯಿಂದೀಚೆಗೆ ಹೆಚ್ಚು ಹಿಂಸಾಕೃತ್ಯ ಗಳೇನೂ ನಡೆಯದ ಹಿನ್ನೆಲೆಯಲ್ಲಿ 9ರ ಪೈಕಿ ಮೂರು ಪ್ರದೇಶಗಳಲ್ಲಿ ಕರ್ಫ್ಯೂ ಸಡಿಲಿಸಲಾಗಿ ದೆ. ಸದ್ಯಕ್ಕೆ ಪರಿಸ್ಥಿತಿ ನಿಯಂತ್ರಣಕ್ಕೆ ಬಂದಿದ್ದು, ಶಾಂತಿಯುತವಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಶುಕ್ರವಾರ ಅಂಗಡಿ, ಮುಂಗಟ್ಟುಗಳು ತೆರೆದಿದ್ದು, ವಾಹನಗಳ ಸಂಚಾರ ಸಹಜವಾಗಿದೆ. ಸೂರತ್‍ನಲ್ಲಿ ವಜ್ರ ಮತ್ತು ಜವಳಿ ಕೈಗಾರಿಕೆಗಳೂ ಎಂದಿನಂತೆ ಕಾರ್ಯನಿರ್ವಹಿಸತೊಡಗಿವೆ. ಶಾಲೆ-ಕಾಲೇಜುಗಳಿಗೆ ಮಾತ್ರ ರಜೆ ಘೋಷಿಸಲಾಗಿದೆ.
ಸಿಐಡಿ ತನಿಖೆಗೆ ಆದೇಶ
ಗಲಭೆ ವೇಳೆ ಬಂಧಿತನಾಗಿದ್ದ ಪಟೇಲ್ ಸಮುದಾಯದ ವ್ಯಕ್ತಿಯೊಬ್ಬನ ಲಾಕಪ್ ಡೆತ್‍ಗೆ ಸಂಬಂಧಿಸಿ ಸಿಐಡಿ ತನಿಖೆ ನಡೆಸುವಂತೆ ಗುಜರಾತ್ ಹೈಕೋರ್ಟ್ ಆದೇಶಿಸಿದೆ. ಸ್ವೆತಾಂಗ್ ಪಟೇಲ್‍ರ ಎರಡನೇ ಮರಣೋತ್ತರ ಪರೀಕ್ಷೆಯ ವರದಿ ಶುಕ್ರವಾರ ಬಂದಿದ್ದು, ತಲೆಗೆ ಗಂಭೀರ ಗಾಯ ಗೊಂಡಿದ್ದರಿಂದ ಮೃತಪಟ್ಟಿರುವುದಾಗಿ ವರದಿ ಹೇಳಿದೆ.
ನಾವು ಮೀಸಲು ವಿರೋಧಿಗಳಲ್ಲ. ಪಟೇಲರಿಗೂ ಮೀಸಲು ಕೊಡಿ ಎನ್ನುವುದಷ್ಟೇ ನಮ್ಮ ಬೇಡಿಕೆ. ಇದು ಈಡೇರುವವರೆಗೂ ಸುಮ್ಮನಾಗುವುದಿಲ್ಲ. ದೆಹಲಿಗೆ ಹೋಗಿ ಗುಜ್ಜರ್ ಸಮುದಾಯದ ನಾಯಕರೊಂದಿಗೆ ಚರ್ಚಿಸಿ, ಹೋರಾಟವನ್ನು ತೀವ್ರಗೊಳಿಸುವ ಬಗ್ಗೆ ನಿರ್ಧರಿಸುತ್ತೇನೆ.
-ಹಾರ್ದಿಕ್ ಪಟೇಲ್ ಪಟೇಲ್, ಸಮುದಾಯದ ನಾಯಕ