ನವದೆಹಲಿ: ಭೂಸ್ವಾಧೀನ ವಿಧೇಯಕ ಅಂಗೀಕಾರಗೊಳ್ಳದೆ ಕಂಗೆಟ್ಟಿರುವ ಕೇಂದ್ರ ಸರ್ಕಾರ ಈಗ ಮೂಲಸೌಕರ್ಯ ಯೋಜನೆಗಳಿಗಿರುವ ಅಡ್ಡಿ ನಿವಾರಣೆಗೆ ಹೊಸ ಪ್ಲ್ಯಾನ್ ಮಾಡಿದೆ.
ಅದು, ಲ್ಯಾಂಡ್ ಪೂಲಿಂಗ್. ಅಂದರೆ, ಅಭಿವೃದ್ಧಿಪಡಿಸಿದ ಬಳಿಕ ಭೂಮಿಯನ್ನು ಮೂಲ ಮಾಲೀಕರಿಗೆ ಬಿಟ್ಟುಕೊಡುವುದು. ಆಂಧ್ರವನ್ನು ಮಾದರಿಯಾಗಿಟ್ಟುಕೊಂಡು ಇಂಥ ಯೋಜನೆಗೆ ಕೇಂದ್ರ ಮುಂದಾಗಿದೆ. ಮೊದಲು ಅಭಿವೃದ್ಧಿ ಯೋಜನೆ ಕೈಗೊಳ್ಳುವುದು. ಬಳಿಕ ಎಕ್ಸ್‍ಪ್ರೆಸ್‍ವೇ, ಸಿಟಿ ಬೈಪಾಸ್ ಯೋಜನೆ ಸೇರಿ ಅಭಿವೃದ್ಧಿಗಾಗಿ ಸ್ವಾಧೀನಪಡಿಸಿಕೊಂಡ ಭೂಮಿಯ ಬಹುತೇಕ ಭಾಗವನ್ನು ಮಾಲೀಕರಿಗೆ ವಾಪಸ್ ನೀಡಿ, ವಾಣಿಜ್ಯ ಉದ್ದೇಶಕ್ಕೆ ಬಳಸುವಂತೆ ಸೂಚಿಸಲಾಗುತ್ತದೆ ಎಂದು ಸಚಿವ ಗಡ್ಕರಿ ಹೇಳಿದ್ದಾರೆ ಎಂದು ಖಾಸಗಿ ಪತ್ರಿಕೆ ವರದಿ ಮಾಡಿದೆ.
ಭೂಸುಗ್ರೀವಾಜ್ಞೆ ಇಲ್ಲ
ಕೇಂದ್ರ ಬಿಹಾರ ಚುನಾವಣೆ ಸಮೀಪಿಸುತ್ತಿರುವಂತೆಯೇ ಕೇಂದ್ರ ಸರ್ಕಾರ ಭೂಸ್ವಾಧೀನ ವಿಧೇಯಕದ ವಿಚಾರದಲ್ಲಿಟ್ಟ ಹೆಜ್ಜೆಯನ್ನು ಹಿಂದಿಕ್ಕಿದೆ. ಈ ಬಗ್ಗೆ ಮತ್ತೊಮ್ಮೆ ಸುಗ್ರೀವಾಜ್ಞೆ ಹೊರಡಿಸುವುದಿಲ್ಲ ಎಂದಿರುವ ಸರ್ಕಾರ, ಯುಪಿಎ ಸರ್ಕಾರ 2013ರಲ್ಲಿ ಅಂಗೀಕರಿಸಿದ್ದ ವಿಧೇಯಕವನ್ನೇ ಮುಂದುವರಿಸಲು ನಿರ್ಧರಿಸಿದೆ. ಅದರಂತೆ, ಸ್ವಾಧೀನ ಪಡಿಸಿಕೊಂಡ ಭೂಮಿಗೆ ಮಾರುಕಟ್ಟೆ ದರದ 4 ಪಟ್ಟು ಹೆಚ್ಚು ಪರಿಹಾರ ಸಿಗಲಿದೆ. ಕೇಂದ್ರ ಸರ್ಕಾರದ ವಿಧೇಯಕವು ಸದ್ಯ ಸಂಸದೀಯ ಸಮಿತಿ ಮುಂದಿದ್ದು, ಅದರ ವರದಿ ಬಂದ ಬಳಿಕ ಮುಂದಿನ ಹೆಜ್ಜೆಯಿಡಲು ನಿರ್ಧರಿಸಲಾಗಿದೆ. ಹೀಗಾಗಿ ಈ ಬಾರಿ ಸುಗ್ರೀವಾಜ್ಞೆ ಲ್ಯಾಪ್ಸ್ ಆಗುವುದು ಬಹುತೇಕ ಖಚಿತ ಎಂದು ನ್ಯೂ ಇಂಡಿಯನ್ ಎಕ್ಸ್‍ಪ್ರೆಸ್ ವರದಿ ಮಾಡಿದೆ.
ಹೊಸ ಯೋಜನೆ
-ಅಭಿವೃದ್ಧಿ ಬಳಿಕ ಸ್ವಾಧೀನಪಡಿಸಿಕೊಂಡ ಭೂಮಿ ವಾಪಸ್ ನೀಡಲು ಹೆದ್ದಾರಿ ಇಲಾಖೆ ಚಿಂತನೆ
-ಸ್ವಾಧೀನಪಡಿಸಿಕೊಂಡ ಭೂಮಿಯಲ್ಲಿ ಶೇ.40ರಷ್ಟನ್ನು ಮೂಲ ಮಾಲೀಕನಿಗೆ ವಾಪಸ್ ನೀಡುವ ಯೋಜನೆ
-ಈ ಮಾದರಿಯನ್ನು ಈಗಾಗಲೇ ಆಂಧ್ರಪ್ರದೇಶವು ತನ್ನ ರಾಜಧಾನಿಯ ಅಭಿವೃದ್ಧಿಗೆ ಬಳಸುತ್ತಿದೆ
-ಸ್ವಾಧೀನ ಪ್ರಕ್ರಿಯೆಯ ವೇಗ ಹೆಚ್ಚಿಸಲು ಇದು ಸಹಕಾರಿ ಎನ್ನುವುದು ಸರ್ಕಾರದ ಅಭಿಪ್ರಾಯ