ನವದೆಹಲಿ: ಕಲ್ಲಿದ್ದಲು ಹಗರಣಕ್ಕೆ ಸಂಬಂಧಿಸಿದಂತೆ ಕಲ್ಲಿದ್ದಲು ಇಲಾಖೆಯ ಮಾಜಿ ಕಾರ್ಯದರ್ಶಿ ಹೆಚ್ ಸಿ ಗುಪ್ತಾ ವಿಶೇಷ ನ್ಯಾಯಾಲಯಕ್ಕೆ ಹೇಳಿಕೆ ನೀಡಿದ್ದು ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಅವರೇ ಕಮಲ್ ಸ್ಪಾಂಜ್ ಸ್ಟೀಲ್ ಅಂಡ್ ಪವರ್ ಸಂಸ್ಥೆಗೆ ಕಲ್ಲಿದ್ದಲು ನಿಕ್ಷೇಪ ಹಂಚಿಕೆಗೆ ಅನುಮತಿ ನೀಡಿದ್ದರು ಎಂದಿದ್ದಾರೆ.
ಹಗರಣದ ತನಿಖೆ ನಡೆಸುತ್ತಿರುವ ಸಿಬಿಐ, ಕಲ್ಲಿದ್ದಲು ಹಂಚಿಕೆ ವಿಷಯದಲ್ಲಿ ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಅವರನ್ನು ಸಂಪೂರ್ಣವಾಗಿ ದಾರಿ ತಪ್ಪಿಸಲಾಗಿತ್ತು ಎಂದು ಕೋರ್ಟ್ ಗೆ ಹೇಳಿಕೆ ನೀಡಿತ್ತು. ಆದರೆ ಈಗ ಕಲ್ಲಿದ್ದಲು ಕಾರ್ಯದರ್ಶಿ ನೀಡಿರುವ ಹೇಳಿಕೆ ಸಿಬಿಐ ಹೇಳಿಕೆಗೆ ವಿರುದ್ಧವಾಗಿದೆ.
ನೈಸರ್ಗಿಕ ಸಂಪನ್ಮೂಲದ ಹಂಚಿಕೆಯಲ್ಲಿ ತಮಗೆ ಪರಮಾಧಿಕಾರ ಇರಲಿಲ್ಲ ಅಂದಿನ ಕಲ್ಲಿದ್ದಲು ಖಾತೆ ಸಚಿವರು ಆಗಿದ್ದ ಮಾಜಿ ಪ್ರಧಾನಿ ಮನಮೋಹನ್ ಸಿಂಗ್, ಕಮಲ್ ಸ್ಪಾಂಜ್ ಸ್ಟೀಲ್ ಅಂಡ್ ಪವರ್ ಸಂಸ್ಥೆಗೆ ಕಲ್ಲಿದ್ದಲು ನಿಕ್ಷೇಪ ಹಂಚಿಕೆ ಮಾಡಲು ಸಂಪೂರ್ಣ ಒಪ್ಪಿಗೆ ನೀಡಿದ್ದರು ಎಂದು ಹೆಚ್.ಸಿ ಗುಪ್ತಾ ನ್ಯಾಯಾಲಯಕ್ಕೆ ತಿಳಿಸಿದ್ದಾರೆ.
ಆದರೆ ಗುಪ್ತಾ ಹೇಳಿಕೆಯ ವಿರುದ್ಧ ವಾದ ಮಂಡಿಸಿರುವ ಸಿಬಿಐ, ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಅವರಿಗೆ ಕಲ್ಲಿದ್ದಲು ಹಂಚಿಕೆ ಬಗ್ಗೆ ಸರಿಯಾದ ಮಾಹಿತಿ ನೀಡಿರಲಿಲ್ಲ. ಕಲ್ಲಿದ್ದಲು ಕಾರ್ಯದರ್ಶಿಯೇ ಪ್ರಧಾನಿ ಕಾರ್ಯಾಲಯದ ಅಧಿಕಾರಿಗಳನ್ನು ದಾರಿತಪ್ಪಿಸಿದ್ದಾರೆ ಎಂದು ಹೇಳಿದೆ. ವಾದ ಆಲಿಸಿದ ವಿಶೇಷ ಕೋರ್ಟ್, ಪ್ರಕರಣದ ವಿಚಾರಣೆಯನ್ನು ಸೆ.16 ಕ್ಕೆ ಮುಂದೂಡಿದೆ.