ವಾಷಿಂಗ್ ಟನ್: 1980 ರಲ್ಲಿ ಮರಳಿ ಅಧಿಕಾರಕ್ಕೆ ಬಂದಿದ್ದ ಮಾಜಿ ಪ್ರಧಾನಿ ಇಂದಿರಾ ಗಾಂಧಿ ಪಾಕಿಸ್ತಾನದ ಅಣುಸ್ಥಾವರಗಳ ಮೇಲೆ ಮಿಲಿಟರಿ ದಾಳಿ ನಡೆಸುವ ಪ್ರಸ್ತಾವನೆಯನ್ನು ಪರಿಗಣಿಸಿದ್ದರು ಎಂಬ ಮಾಹಿತಿ ಹೊರಬಿದ್ದಿದೆ.
ಪಾಕಿಸ್ತಾನ ಅಣ್ವಸ್ತ್ರ ಪಡೆಯುವುದನ್ನು ತಡೆಗಟ್ಟುವುದಕ್ಕೆ ಇಂದಿರಾ ಗಾಂಧಿ ಈ ಯೋಜನೆ ರೂಪಿಸಿದ್ದರು ಎಂದು ಸಿಐಎ ದಾಖಲೆಗಳು ಬಹಿರಂಗಪಡಿಸಿದೆ. 1980 ರಲ್ಲಿ ಪಾಕಿಸ್ತಾನಕ್ಕೆ ಅಮೇರಿಕಾ ಫೈಟರ್ ಜೆಟ್ ಎಫ್-16 ನ್ನು ಪೂರೈಕೆ ಮಾಡುತ್ತಿತ್ತು. ಇದನ್ನು ತಡೆಗಟ್ಟಲು ಇಂದಿರಾ ಗಾಂಧಿ ಮಿಲಿಟರಿ ದಾಳಿ ನಡೆಸುವ ಬಗ್ಗೆ ಚಿಂತನೆ ನಡೆಸಿದ್ದರು ಎಂದು ಸಿಐಎ ನಲ್ಲಿ ವೆಬ್ ಸೈಟ್ ಪ್ರಕಟವಾಗಿರುವ 12 ಪುಟಗಳ ದಾಖಲೆಯಿಂದ ತಿಳಿದುಬಂದಿದೆ.
ಇಂದಿರಾ ಗಾಂಧಿ ಈ ಬಗ್ಗೆ ಯಾವುದೇ ಅಂತಿಮ ನಿರ್ಧಾರ ಕೈಗೊಂಡಿರಲಿಲ್ಲ. ಕೇವಲ ಪ್ರಸ್ತಾವನೆಯನ್ನು ಪರಿಗಣಿಸಿದ್ದರು ಎಂದು ಸಿಐಎ ವರದಿ ಹೇಳಿದೆ. ಪಾಕಿಸ್ತಾನ ಅಣ್ವಸ್ತ್ರ ಪಡೆಯುವುದಕ್ಕೆ ಅಪಾರ ಪ್ರಮಾಣದ ಯುರೇನಿಯಂ ನ್ನು ಉತ್ಪಾದಿಸುತ್ತಿದ್ದರಿಂದ ಭಾರತಕ್ಕೆ ಎದುರಾಗಲಿರುವ ಅಪಾಯವನ್ನು ಊಹಿಸಿದ್ದ ಇಂದಿರಾ ಗಾಂಧಿ ಭಾರತದಲ್ಲೂ ಅಣ್ವಸ್ತ್ರ ಪರೀಕ್ಷೆಗೆ ಸಿದ್ಧತೆ ಮಾಡುವುದಕ್ಕೆ ಸೂಚಿಸಿದ್ದರು ಎಂದು ಸಿಐಎ ಹೇಳಿದೆ. ಒಂದು ವೇಳೆ ಪಾಕಿಸ್ತಾನದಿಂದ ಭಾರತಕ್ಕೆ ಅಪಾಯ ಎದುರಾಗುವ ಸಾಧ್ಯತೆಗಳಿದ್ದರೆ ಪಾಕಿಸ್ತಾನದ ಅಣು ಸ್ಥಾವರಗಳ ಮೇಲೆ ಮಿಲಿಟರಿ ದಾಳಿ ನಡೆಸುವ ಪ್ರಸ್ತಾವನೆ ಪರಿಗಣಿಸಿದ್ದರು.