ಭೂಪಾಲ್: ಭಾರತ ಬಗ್ಗೆ ತೀಕ್ಷ್ಣ ಹೇಳಿಕೆ ನೀಡುತ್ತಿರುವ ಪಾಕಿಸ್ತಾನವು ಮೊದಲು ಇತಿಹಾಸವನ್ನು ಓದಿ ಮನನ ಮಾಡಿಕೊಂಡು ಹೇಳಿಕೆ ನೀಡಲಿ ಎಂದು ರಕ್ಷಣಾ ತಜ್ಞ ಎಸ್.ಆರ್.ಸಿನ್ಹೋ ಸೋಮವಾರ ಹೇಳಿದ್ದಾರೆ.
ಈ ಕುರಿತಂತೆ ಮಾತನಾಡಿರುವ ಅವರು, ಪಾಕಿಸ್ತಾನದ ರಕ್ಷಣಾ ಸಚಿವ ಮಾತು ಸಾಕಷ್ಟು ಆಶ್ಚರ್ಯ ಹಾಗೂ ಆಘಾತ ಉಂಟು ಮಾಡಿತು. ಈ ಹಿಂದೆ ಭಾರತ ವಿರುದ್ಧ ತಿರುಗಿ ಬಿದ್ದು ಸೋತು ಸುಣ್ಣವಾದರೂ ಭಾರತದ ವಿರುದ್ಧವೇ ಈ ರೀತಿ ಹೇಳಿಕೆ ನೀಡುತ್ತಿರುವ ಖಂಡನಾರ್ಹವಾಗಿದೆ ಎಂದು ಹೇಳಿದ್ದಾರೆ.
ಭಾರತದ ವಿರುದ್ಧ ಅವಹೇಳನಕಾರಿ ಹಾಗೂ ಪರಿಜ್ಞಾನವಿಲ್ಲದೆ ಹೇಳಿಕೆ ನೀಡುತ್ತಿರುವ ಖ್ವಾಜಾ ಮೊಹಮ್ಮದ್ ಆಸಿಫ್ ಅವರು ಮೊದಲು ಇತಿಹಾಸವನ್ನು ಮನನ ಮಾಡುವ ಅಗತ್ಯವಿದೆ. ಪಾಕಿಸ್ತಾನ ಈ ಹಿಂದೆ ಏನಾಗಿದೆ ಎಂಬುದರ ಇತಿಹಾಸವನ್ನು ನೋಡುತ್ತಿಲ್ಲ. ಭಾರತದೊಂದಿಗೆ ಮಾತನಾಡುವಾಗ ಹಾಗೂ ವ್ಯವಹರಿಸುವ ಪಾಕಿಸ್ತಾನ ಮೊದಲು ಇತಿಹಾಸವನ್ನು ಓದಿಕೊಳ್ಳುವ ಅಗತ್ಯವಿದೆ ಎಂದು ಹೇಳಿದ್ದಾರೆ.
ಮಾಧ್ಯಮಗಳೊಂದಿಗೆ ಮಾತನಾಡಿದ್ದ ಪಾಕಿಸ್ತಾನ ರಕ್ಷಣಾ ಸಚಿವ ಖ್ವಾಜಾ ಮೊಹಮ್ಮದ್ ಆಸಿಫ್ ಅವರು, ಪಾಕಿಸ್ತಾನದ ಯೋಧರು ತಾಯಿನಾಡು ಪಾಕಿಸ್ತಾನದ ಒಂದೊಂದು ಇಂಚಿನ ಭೂಮಿಯನ್ನು ಕಾಯುತ್ತಿದ್ದಾರೆ. ಒಂದು ವೇಳೆ ಭಾರತ ಯುದ್ಧ ಸಾರಿದ್ದೇ ಆದರೆ, ಭಾರತ ಸಾಕಷ್ಟು ನಷ್ಟವನ್ನು ಅನುಭವಿಸಬೇಕಾಗುತ್ತದೆ. ಯುದ್ಧ ಪ್ರತಿಯಾಗಿ ಪಾಕಿಸ್ತಾನ ಭಾರತಕ್ಕೆ ತಕ್ಕ ಪಾಠ ಕಲಿಸುತ್ತದೆ. ಭಯೋತ್ಪಾದನೆಗೆ ಬೆಂಬಲ ಕುರಿತಂತೆ ಭಾರತದ ನಿಜವಾದ ಮುಖ ಇದೀಗ ತೆರೆದುಕೊಂಡಿದೆ. ಗಡಿಯಲ್ಲಿ ಅಶಾಂತಿ ವಾತಾವರಣ ವಿಷಯ ಪ್ರಪಂಚದಾದ್ಯಂತ ಸುದ್ದಿಯಾಗುತ್ತಿದೆ ಎಂದು ಹೇಳಿದ್ದರು. ಪಾಕಿಸ್ತಾನ ರಕ್ಷಣಾ ಸಚಿವರ ಈ ಹೇಳಿಕೆ ಹಲವು ವಿವಾದಗಳನ್ನು ಸೃಷ್ಟಿ ಮಾಡಿದ್ದು, ಹಲವು ವಿರೋಧಗಳು ವ್ಯಕ್ತವಾಗುತ್ತಿವೆ.