ಕೋಲ್ಕತ್ತಾ: ಶೀನಾ ಬೋರಾ ಕೊಲೆ ಪ್ರಕರಣದಲ್ಲಿ ಮತ್ತೊಂದು ಹೊಸ ಬೆಳವಣಿಗೆ ನಡೆದಿದ್ದು, ಶೀನಾಳ ತಂದೆ ಎಂದು ಹೇಳಿಕೊಂಡಿರುವ ಸಿದ್ಧಾರ್ಥ್ ದಾಸ್, ಇಂದ್ರಾಣಿ ಮುಖರ್ಜಿ ಕೊಲೆ ಮಾಡಿದ್ದರೆ ಆಕೆಯನ್ನು ಗಲ್ಲಿಗೇರಿಸಿ ಎಂದು ಹೇಳಿದ್ದಾರೆ.
ಇಂದ್ರಾಣಿ ಮುಖರ್ಜಿ ನನ್ನ ಮಗಳು ಶೀನಾಳನ್ನು ಕೊಲೆ ಮಾಡಿದ್ದರೆ ಆಕೆಗೆ ಗಲ್ಲು ಶಿಕ್ಷೆ ವಿಧಿಸಬೇಕೆಂದು ಒತ್ತಾಯಿಸಿದ್ದಾರೆ. ಇಂದ್ರಾಣಿಯ ಮೊದಲ ಪತಿ ಸಿದ್ಧಾರ್ಥ್ ದಾಸ್, ಹಣಕ್ಕಾಗಿ ಶೀನಾ ಬೋರಾಳನ್ನು ಇಂದ್ರಾಣಿ ಮುಖರ್ಜಿ ಹತ್ಯೆ ಮಾಡಿರುವ ಸಾಧ್ಯತೆಗಳಿವೆ ಎಂದು ಅನುಮಾನ ವ್ಯಕ್ತಪಡಿಸಿದ್ದಾರೆ.
ಇಂದ್ರಾಣಿ ಮುಖರ್ಜಿ ಯೊಂದಿನ ಸಂಬಂಧ ಮುರಿದುಬಿದ್ದಾಗಿನಿಂದ ನನ್ನೊಂದಿಗೆ ಸಂಪರ್ಕದಲ್ಲಿರಲಿಲ್ಲ, ಇಂದ್ರಾಣಿಯೇ ನನ್ನೊಂದಿಗಿನ ಸಂಬಂಧವನ್ನು ತೊರೆದಿದ್ದರು ಈ ಬಗ್ಗೆ ಅವರನ್ನೇ ಪ್ರಶ್ನಿಸಿ ಎಂದು ಸಿದ್ಧಾರ್ಥ್ ದಾಸ್ ಹೇಳಿದ್ದಾರೆ. ಅಗತ್ಯವಿದ್ದರೆ ಶೀನಾ ಬೋರಾ ಕೊಲೆ ಪ್ರಕರಣದಲ್ಲಿ ಪೊಲೀಸರಿಗೆ ನೆರವು ನೀಡುವುದಾಗಿ ಸಿದ್ಧಾರ್ತ್ ದಾಸ್ ಹೇಳಿದ್ದಾರೆ.
ಕೊಲೆ ಪ್ರಕರಣದ ಪ್ರಮುಖ ಆರೋಪಿಗಳಾಗಿರುವ ಇಂದ್ರಾಣಿ ಮುಖರ್ಜಿ, ಸಂಜೀವ್ ಖನ್ನಾ, ಕಾರು ಚಾಲಕ ಶಾಮ್ ರೈ ಪೊಲೀಸ್ ಕಸ್ಟಡಿ ಸೆಪ್ಟೆಂಬರ್ 5 ವರೆಗೆ ವಿಸ್ತರಣೆಯಾಗಿದೆ. ಟಿವಿ ಸುದ್ದಿ ವಾಹಿನಿಯೊಂದಕ್ಕೆ ನೀಡಿರುವ ಸಂದರ್ಶನದಲ್ಲಿ ಈ ವಿಷಯ ದೃಢಪಡಿಸಿರುವ ಅವರು, ತಾನು ಅವರಿಬ್ಬರ ತಂದೆ ಎಂದು ಖಾತರಿಪಡಿಸಲು ಡಿಎನ್ ಎ ಪರೀಕ್ಷೆಗೆ ಒಳಪಡಲು ಸಿದ್ಧ ಎಂದು ಹೇಳಿದ್ದಾರೆ.