ನವದೆಹಲಿ/ಕೋಲ್ಕತ್ತಾ: ತಾನು ಶೀನಾ ಬೋರಾ ಮತ್ತು ಮೈಕೆಲ್ ಬೋರಾ ಅವರ ನಿಜವಾದ ತಂದೆ ಎಂದು ಸಿದ್ಧಾರ್ಥ್ ದಾಸ್ ದೃಢಪಡಿಸಿದ್ದಾರೆ.
ಟಿವಿ ಸುದ್ದಿ ವಾಹಿನಿಯೊಂದಕ್ಕೆ ನೀಡಿರುವ ಸಂದರ್ಶನದಲ್ಲಿ ಈ ವಿಷಯ ದೃಢಪಡಿಸಿರುವ ಅವರು, ತಾನು ಅವರಿಬ್ಬರ ತಂದೆ ಎಂದು ಖಾತರಿಪಡಿಸಲು ಡಿಎನ್ ಎ ಪರೀಕ್ಷೆಗೆ ಒಳಪಡಲು ಸಿದ್ಧ ಎಂದು ಹೇಳಿದ್ದಾರೆ.
''ನಾನು ಇಂದ್ರಾಣಿ ಮುಖರ್ಜಿ ಅವರನ್ನು ಮದುವೆಯಾಗಿರಲಿಲ್ಲ. ಒಟ್ಟಿಗೆ ಲಿವಿಂಗ್ ಟುಗೆದರ್ ಸಂಬಂಧದಲ್ಲಿ ಇದ್ದೆವು. ಮಕ್ಕಳಿಬ್ಬರು ಆಗ ಹುಟ್ಟಿದರು.ನಂತರ ಇಂದ್ರಾಣಿ ಮತ್ತು ನಾನು 1989ರಲ್ಲಿ ದೂರವಾದೆವು.ನಂತರ ನಾನು ಆಕೆಯನ್ನು ಭೇಟಿಯಾಗಲಿಲ್ಲ ಎಂದು ಸಿದ್ದಾರ್ಥ್ ದಾಸ್ ತಿಳಿಸಿದ್ದಾರೆ.
ಇಂದ್ರಾಣಿ ಯಾಕೆ ನಿಮ್ಮನ್ನು ಬಿಟ್ಟರು ಎಂದು ಕೇಳಿದಾಗ, ಆಕೆಗೆ ನನ್ನ ಆರ್ಥಿಕ ಪರಿಸ್ಥಿತಿ ಮತ್ತು ಸ್ಥಾನಮಾನಗಳಿಂದ ತೃಪ್ತಿ ಸಿಕ್ಕಿರಲಿಕ್ಕಿಲ್ಲ. ಆ ಕಾರಣಕ್ಕೆ ದೂರವಾಗಿರಬಹುದು ಎಂದು ಹೇಳಿದ್ದಾರೆ.
ಶೀನಾಗೆ ನಾನು ಅವಳ ತಂದೆ ಎಂಬುದು ತಿಳಿದಿತ್ತು. ಸ್ವಂತ ತಾಯಿಯೇ ಮಗಳನ್ನು ಕೊಂದಿರಬಹುದೇ ಎಂದು ಕೇಳಿದಾಗ, ಇರಬಹುದು, ಯಾಕೆಂದರೆ ಇಂದ್ರಾಣಿಗೆ ಹಣದ ಮೇಲೆ ವ್ಯಾಮೋಹ ವಿಪರೀತವಾಗಿತ್ತು. ಈ ಪ್ರಕರಣ ಕುರಿತು ಪೊಲೀಸರು ವಿಚಾರಣೆಗೆ ಕರೆದಲ್ಲಿ ಸಹಕಾರ ನೀಡುವುದಾಗಿ ಸಿದ್ದಾರ್ಥ್ ದಾಸ್ ತಿಳಿಸಿದ್ದಾರೆ.
ತಾನು 1998ರಿಂದ ಕೋಲ್ಕತ್ತಾದಲ್ಲಿ ವಾಸಿಸುತ್ತಿದ್ದು, ಸಣ್ಣ ಕಂಪೆನಿಯೊಂದರಲ್ಲಿ ಉದ್ಯೋಗ ಮಾಡುತ್ತಿರುವುದಾಗಿ ತಿಳಿಸಿದ್ದಾರೆ.