ನವದೆಹಲಿ: ಪುಣೆಯ ಯರವಾಡ ಕಾರಾಗೃಹವಾಸಿಗಳಿಗೆ ಸಿಹಿಸುದ್ದಿ. ಇಲ್ಲಿ ಏರ್ಪಡಿಸಲಾದ ಯೋಗ ಪರೀಕ್ಷೆಗಳಲ್ಲಿ ಉನ್ನತ ಮಟ್ಟದ ಅಂಕಗಳನ್ನು ಗಳಿಸಿದ ಕೈದಿಗಳನ್ನು ಬೇಗನೆ ಬಿಡುಗಡೆ ಮಾಡಲಾಗುತ್ತದೆ.
ಮಹಾತ್ಮ ಗಾಂಧಿಯವರು ಎರಡು ಬಾರಿ ಕಾಲ ಕಳೆದಿದ್ದ ಈ ಜೈಲಿನಲ್ಲಿ ಯೋಗ ತರಬೇತಿಯನ್ನು ನಡೆಸಲಾಗುತ್ತಿದೆ. ಇದರ ಕೊನೆಯಲ್ಲಿ ನಡೆಸಲಾಗುವ ಪರೀಕ್ಷೆಗಳಲ್ಲಿ ಹೆಚ್ಚಿನ ಮಾಕ್ರ್ಸ್ ತೆಗೆದವರಿಗೆ ಅವರು ಶಿಕ್ಷಾವಧಿಯ ಮೂರು ತಿಂಗಳ ಮೊದಲೇ ಬಿಡುಗಡೆಯಾಗುವ ಕೊಡುಗೆಯನ್ನು ಜೈಲಿನ ನಿರ್ದೇಶಕರು ನೀಡಿದ್ದಾರೆ ಎಂದು `ದ ಟೆಲಿಗ್ರಾಫ್ ವರದಿ ಮಾಡಿದೆ.
ಯೋಗ ನಮ್ಮ ಮಾನಸಿಕ ಮತ್ತು ದೈಹಿಕ ಸ್ಥಿತಿಯನ್ನು ಉತ್ತಮಪಡಿಸುತ್ತದೆ. ನಮ್ಮಲ್ಲಿರುವ ಹಿಂಸಾತ್ಮಕ ವರ್ತನೆಗಳನ್ನು ಹತ್ತಿಕ್ಕಿ ವರ್ತನೆಯನ್ನು ಸುಧಾರಿಸುತ್ತದೆ. ಉತ್ತಮ ನಡವಳಿಕೆಗೆ ಸರ್ಕಾರ ಶಿಕ್ಷಾವಧಿ ವಿನಾಯಿತಿ ನೀಡಿದೆ. ಹಾಗೇ ನಾವು ಯೋಗ ಸಾಧನೆಗೆ ಈ ವಿನಾಯಿತಿ ನೀಡುತ್ತಿದ್ದೇವೆ ಎಂದು ಜೈಲಿನ ನಿರ್ದೇಶಕರಾದ ಭೂಷಣ್‍ಕುಮಾರ್ ಉಪಾಧ್ಯಾಯ ಹೇಳಿದ್ದಾರೆ. ಆರು ತಿಂಗಳ ಈ ತರಬೇತಿಯ ಕೊನೆಯಲ್ಲಿ ಪ್ರಾಯೋಗಿಕ ಹಾಗೂ ಲಿಖಿತ ಪರೀಕ್ಷೆಗಳಿವೆ. ಜೈಲಿನ 1,500 ನಿವಾಸಿಗಳು ಭಾಗವಹಿಸಿದ್ದಾರೆ. ಇದು ದೇಶಾದ್ಯಂತ ಹಬ್ಬಲಿ ಎಂಬುದು ಉಪಾಧ್ಯಾಯ ಆಶಯ. ಈ ಅವಧಿ ವಿನಾಯಿತಿಗೆ ಇತರ ಉದ್ಯೋಗ ಯೋಜನೆಗಳಲ್ಲಿ ಕೈದಿಗಳು ತೋರಿಸುವ ಪ್ರಗತಿಯೂ ಪೂರಕವಾಗಿ ಪರಿಗಣಿಸಲ್ಪಡುತ್ತದೆ.
ಯರವಾಡ ಕಾರಾಗೃಹಕ್ಕೆ ಈ ಬಗೆಯ ಸುಧಾರಣಾ ಕ್ರಮಗಳ ಇತಿಹಾಸವೇ ಇದೆ. 2002ರಲ್ಲಿ ಗಾಂಧಿ ತತ್ವಗಳ ಕಲಿಕೆ ಏರ್ಪಡಿಸಲಾಗಿತ್ತು. ಒಂದು ವರ್ಷದ ಈ ಕೋರ್ಸ್‍ನ ನಂತರ ಮೂರನೇ ಎರಡು ಭಾಗ ಕೈದಿಗಳು ತಾವು ಎಸಗಿದ ಅಪರಾಧದ ಸಂತ್ರಸ್ತರ ಬಳಿ ಕ್ಷಮೆ ಯಾಚಿಸಲು ಸಿದ್ಧರಾಗಿದ್ದರು. ಜೈಲಿನೊಳಗಿನ ಹಿಂಸಾತ್ಮಕ ಘಟನೆಗಳು ಕಡಿಮೆಯಾಗಿದ್ದವು.