ನವದೆಹಲಿ: ಬಾಲಿವುಡ್ ನಟ ಸಲ್ಮಾನ್ ಖಾನ್ ಬಾಕ್ಸ್ ಆಫೀಸ್ ಸುಲ್ತಾನನಾಗಿರಬಹುದು. ಆದರೆ ಅವರು ತಮ್ಮ ವಿರುದ್ಧದ ಎಲ್ಲಾ ಕಾನೂನು ತೊಡಕುಗಳನ್ನು ನಿವಾರಿಸಿಕೊಳ್ಳಬೇಕಾಗಿದೆ.
2002ರ ಗುದ್ದೋಡು ಪ್ರಕರಣದಲ್ಲಿ ಸಲ್ಮಾನ್ ಖಾನ್ ಗೆ ನೀಡಿದ್ದ ಜಾಮೀನು ಅರ್ಜಿಯನ್ನು ರದ್ದುಪಡಿಸುವಂತೆ ಕೋರಿ ಸಲ್ಲಿಸಿದ್ದ ಅರ್ಜಿಯನ್ನು ಸುಪ್ರೀಂ ಕೋರ್ಟ್ ತಿರಸ್ಕರಿಸಿದೆ.
ಪೊಲೀಸ್ ಕಾನ್ಸ್ಟೇಬಲ್ ರವಿಂದರ್ ಪಾಟೀಲ್ ಅವರ ತಾಯಿ ಸಲ್ಮಾನ್ ಗೆ ನೀಡಿದ್ದ ಜಾಮೀನನ್ನು ರದ್ದುಪಡಿಸುವಂತೆ ಅರ್ಜಿ ಸಲ್ಲಿಸಿದ್ದರು.
ಇದೇ ಸಂದರ್ಭದಲ್ಲಿ ಪ್ರಾಸಿಕ್ಯೂಷನ್ ಪರ ವಕೀಲ ನ್ಯಾಯಾಲಯಕ್ಕೆ ಹೇಳಿಕೆ ನೀಡಿ, 2002ರಲ್ಲಿ ಸಲ್ಮಾನ್ ಖಾನ್ ಪಾನಮತ್ತನಾಗಿ ಟೊಯೊಟಾ ಲ್ಯಾಂಡ್ ಕ್ರೂಸರ್ ಕಾರು ಚಲಾಯಿಸುತ್ತಾ ಮುಂಬೈಯ ಬಾಂದ್ರಾದ ಬೇಕರಿಗೆ ನುಗ್ಗಿ ಓರ್ವ ಸಾವಿಗೀಡಾಗಿ ಇತರ ನಾಲ್ಕು ಮಂದಿ ಗಾಯಗೊಂಡಿದ್ದರು ಎಂದು ತಮ್ಮ ವಾದವನ್ನು ಮುಗಿಸಿದ್ದಾರೆ.
ಈ ಕೇಸಿನ ವಿಚಾರಣೆ ನಡೆಸುತ್ತಿರುವ ಮುಂಬೈ ಹೈಕೋರ್ಟಿನ ನ್ಯಾಯಾಧೀಶ ನ್ಯಾಯಮೂರ್ತಿ ಎ.ಆರ್.ಜೋಶಿ, ಅವರು ಸದ್ಯದಲ್ಲಿಯೇ ವಿಚಾರಣೆ ಮತ್ತೆ ಆರಂಭಿಸಲಿದ್ದಾರೆ. ಈ ವರ್ಷ ಮೇ ತಿಂಗಳಲ್ಲಿ 2002ರ ಗುದ್ದೋಡು ಪ್ರಕರಣದಲ್ಲಿ ಸಲ್ಮಾನ್ ಖಾನ್ ಗೆ 5 ವರ್ಷ ಜೈಲು ಶಿಕ್ಷೆಯನ್ನು ವಿಧಿಸಿ ಸೆಷನ್ಸ್ ನ್ಯಾಯಾಲಯ ತೀರ್ಪು ನೀಡಿತ್ತು. ಅದನ್ನು ಪ್ರಶ್ನಿಸಿ ಸಲ್ಮಾನ್ ಖಾನ್ ಹೈಕೋರ್ಟಿನಲ್ಲಿ ಮನವಿ ಸಲ್ಲಿಸಿದ್ದರು.