ನವದೆಹಲಿ: ದೆಹಲಿಯಲ್ಲಿ 2012ರಲ್ಲಿ ನಡೆದ ನಿರ್ಭಯಾ ಅತ್ಯಾಚಾರ ಪ್ರಕರಣದ ಬಾಲಾಪರಾಧಿ ತನ್ನ ಶಿಕ್ಷೆ ಪೂರೈಸಿ ಶೀಘ್ರದಲ್ಲೇ ಬಿಡುಗಡೆಯಾಗಲಿದ್ದಾನೆ.
ಆದರೆ ಆತನನ್ನು ಕಣ್ಗಾವಲಿಗೆ ಒಳಪಡಿಸಲಾಗುತ್ತದೆ. 21 ವರ್ಷದ ಈ ಯುವಕನ ಮೇಲೆ ಎನ್‍ಜಿಒ ಒಂದು ನಿಗಾ ಇಡಲಿದೆ ಎಂದು ಹೇಳಲಾಗಿದೆ. ಅತ್ಯಾಚಾರ ಪ್ರಕರಣದಲ್ಲಿ ಭಾಗಿಯಾದ ಒಟ್ಟು 6 ಜನರ ಪೈಕಿ ಈತನೇ ಕಿರಿಯನಾಗಿದ್ದ.
23 ವರ್ಷದ ಪ್ಯಾರಾಮೆಡಿಕಲ್ ವಿದ್ಯಾರ್ಥಿನಿ ಮೇಲೆ ಈ ತಂಡ ದೆಹಲಿಯ ಬಸ್ಸೊಂದರಲ್ಲಿ ಸಾಮೂಹಿಕ ಅತ್ಯಾಚಾರ ಮಾಡಿ, ಭೀಕರವಾಗಿ ಹಿಂಸಿಸಿತ್ತು. ಯುವಕನ ಬಿಡುಗಡೆ ಬಗ್ಗೆ `ಟೈಮ್ಸ್ ನೌ' ಸುದ್ದಿವಾಹಿನಿ ವರದಿ ಮಾಡಿದೆ. ಹಿಂದೆ ಕೇಂದ್ರ ಸಚಿವೆ ಮನೇಕಾ ಗಾಂಧಿ ಅವರು ಅಪರಾಧಿಯ ಬಿಡುಗಡೆ ಕುರಿತು ಆತಂಕ ವ್ಯಕ್ತಪಡಿಸಿದ್ದರು.
ಆತ ಹೊರಬಂದ ಮೇಲೂ ಆತನ ಮೇಲೊಂದು ಕಣ್ಣಿಡಬೇಕು ಎಂದು ಅಬಿsಪ್ರಾಯಪಟ್ಟಿದ್ದರು. ಇದೇ ವೇಳೆ ಅತ್ಯಾಚಾರ ದುರ್ದೈವಿಯ ಪೋಷಕರೂ ಕಾನೂನು ವ್ಯವಸ್ಥೆಯ ಬಗ್ಗೆ ತಮ್ಮ ಅಸಮಾಧಾನ ವ್ಯಕ್ತಪಡಿಸಿ, ಅಪರಾಧಿ ಸುಧಾರಣೆ ಗೊಂಡಿದ್ದಾನೋ ಇಲ್ಲವೋ ತಿಳಿಯದೇ ಬಾಲಾಪರಾಧಿ ಎಂಬ ಕಾರಣದಿಂದ ಮೂರೇ ವರ್ಷದಲ್ಲಿ ಹೊರಬಿಡುವ ಬಗ್ಗೆ ಅಚ್ಚರಿ ತೋರಿದ್ದರು.
ಮಿಕ್ಕ 5 ಮಂದಿಯಲ್ಲಿ ಒಬ್ಬ ಜೈಲಿನಲ್ಲೇ ಮೃತಪಟ್ಟಿದ್ದಾನೆ. ನಾಲ್ವರು ಮರಣದಂಡನೆಯ ಭೀತಿಯಲ್ಲಿದ್ದಾರೆ. ಅತ್ಯಾಚಾರಕ್ಕೊಳಗಾದ ನಿರ್ಭಯಾ 13 ದಿನ ಕಾಲ ಸಿಂಗಾಪುರ್‍ನ ಆಸ್ಪತ್ರೆಯೊಂದರಲ್ಲಿ ಸಾವು ಬದುಕಿನ ನಡುವೆ ಹೋರಾಡಿ, ಮರಣಹೊಂದಿದ್ದರು.