ದೇಶ

ವಿಚಾರವಾದಿಗಳ ಹತ್ಯೆ: ಕೇಂದ್ರ ಗೃಹ ಸಚಿವರ ಹೇಳಿಕೆ ದಾರಿ ತಪ್ಪಿಸುವಂತಿದೆ

Srinivasamurthy VN

ನವದೆಹಲಿ: ವಿಚಾರವಾದಿಗಳಾದ ನರೇಂದ್ರ ದಾಭೋಲ್ಕರ್, ಎಂ.ಎಂ. ಕಲಬುರ್ಗಿ ಮತ್ತು ಗೋವಿಂದ ಪಾನ್ಸರೆ ಅವರ ಹತ್ಯೆಯ ನಡುವೆ ಸಂಬಂಧವಿಲ್ಲ ಎಂಬ ಕೇಂದ್ರ ಗೃಹ ಖಾತೆಯ  ಸಹಾಯಕ ಸಚಿವ ಕಿರಣ್ ರಿಜಿಜು ಅವರ ಹೇಳಿಕೆಯನ್ನು ದಾಭೋಲ್ಕರ್ ಕುಟುಂಬ ಸಾರಾ ಸಗಟಾಗಿ ತಿರಸ್ಕರಿಸಿದೆ.

ಈ ಹೇಳಿಕೆ ನೀಡುವ ಮೂಲಕ ರಿಜಿಜು ಅವರು, ತನಿಖೆಯ ಹಾದಿ ತಪ್ಪಿಸುತ್ತಿದ್ದಾರೆ. ಈ ಮೂರು ಹತ್ಯೆಗಳಿಗೂ ಸಂಬಂಧವಿದೆ ಎಂದು ನರೇಂದ್ರ ದಾಭೋಲ್ಕರ್ ಪುತ್ರ ಹಮಿದ್ ದಾಭೋಲ್ಕರ್  ಅವರು ಪ್ರತಿಪಾದಿಸಿದ್ದಾರೆ. ಕಿರಣ್ ರಿಜಿಜು ಅವರು ಯಾವುದೇ ಮಾಹಿತಿಯನ್ನು ಇಟ್ಟುಕೊಂಡು ಮಾತನಾಡಿಲ್ಲ. ಜತೆಗೆ ಅವರು ಸಂಸತ್ ಅನ್ನೂ ದಾರಿ ತಪ್ಪಿಸಿದ್ದಾರೆ. ಆದರೆ ಮೂರು ಹತ್ಯೆಯ  ಹಿಂದಿನ ಉದ್ದೇಶವನ್ನು ಮಾತ್ರ ಯಾರೂ ಹೀಗಳೆಯಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ. ಅಲ್ಲದೆ ನರೇಂದ್ರ ದಾಭೋಲ್ಕರ್ ಹುಟ್ಟುಹಾಕಿದ್ದ ಮಹಾರಾಷ್ಟ್ರ ಅಂಧಶ್ರದ್ಧಾ ನಿರ್ಮೂಲನ ಸಮಿತಿಯ  ಮಹಾರಾಷ್ಟ್ರ ಘಟಕದ ಅಧ್ಯಕ್ಷ ಅವಿನಾಶ್ ಪಟೇಲ್ ಮಾತನಾಡಿ, ``ತನಿಖಾ ಸಂಸ್ಥೆಗಳ ಪ್ರಕಾರ, ಮೂರು ಹತ್ಯೆಗಳನ್ನು ವೈಯಕ್ತಿಕ ಕಾರಣಕ್ಕಾಗಿ ಮಾಡಿಲ್ಲ.

ಆದರೆ ಅವರ ಚಿಂತನೆಗೆ ವಿರುದ್ಧವಾದ ಮತ್ತು ಅವರ ಸಾರ್ವಜನಿಕ ಕೆಲಸಗಳಿಂದಾಗಿಯೇ ಈ ಹತ್ಯೆಗಳನ್ನು ಮಾಡಲಾಗಿದೆ'' ಎಂದು ಹೇಳಿದ್ದಾರೆ. ಡಿ.2 ರಂದು ಗೃಹ ಖಾತೆಯ ಸಹಾಯಕ ಸಚಿವ  ಕಿರಣ್ ರಿಜಿಜು ಅವರು, ಈ ಮೂರು ಹತ್ಯೆಗಳ ನಡುವೆ ಸಾಮ್ಯತೆ ಇಲ್ಲ ಎಂದು ಲಿಖಿತ ರೂಪದಲ್ಲಿ ಉತ್ತರ ನೀಡಿದ್ದರು.

SCROLL FOR NEXT