ನವದೆಹಲಿ: ಸ್ಟಾರ್ಟ್‍ಅಪ್‍ಗಳಿಗೆ ಉತ್ತಮ ಪರಿಸರ ನಿರ್ಮಿಸುವುದಕ್ಕೆ ಅಗತ್ಯವಾದ ನೀತಿ ರೂಪಿಸಲು ಕೇಂದ್ರ ಸರ್ಕಾರ ತಂಡವೊಂದನ್ನು ರಚಿಸಿದೆ.
ಈ ತಂಡಕ್ಕೆ ನೆರವು ಕಲ್ಪಿಸಲು ಕನ್ಸಲ್ಟಿಂಗ್ ಏಜೆನ್ಸಿಯನ್ನೂ ನೇಮಕ ಮಾಡಲಾಗಿದೆ ಎಂದು ಕೇಂದ್ರ ವಾಣಿಜ್ಯ ಮತ್ತು ಕೈಗಾರಿಕಾ ಸಚಿವರಾದ ನಿರ್ಮಲಾ ಸೀತಾರಾಮನ್ ಸೋಮವಾರ ಲೋಕಸಭೆಗೆ ಮಾಹಿತಿ ನೀಡಿದರು. ಸ್ಟಾರ್ಟ್‍ಅಪ್‍ಗಳ ಆರಂಭದಲ್ಲಿ ಭಾರತ ಜಗತ್ತಿನಲ್ಲೇ ಮೂರನೆ ಸ್ಥಾನದಲ್ಲಿದೆ. ಅಮೆರಿಕ ಮತ್ತು ಬ್ರಿಟನ್‍ಗಳು ಮೊದಲ ಎರಡು ಸ್ಥಾನಗಳನ್ನು ಆಕ್ರಮಿಸಿವೆ. ಭಾರತದಲ್ಲಿ ಬೆಂಗಳೂರು, ನವದೆಹಲಿ ಮತ್ತು ಮುಂಬೈ ಪ್ರಮುಖ ಸ್ಟಾರ್ಟ್ ಅಪ್‍ಗಳ ಕೇಂದ್ರಗಳಾಗಿವೆ. ಭಾರತದಲ್ಲಿ ಪ್ರತಿ ನಿಮಿಷಕ್ಕೆ ಇಂತಿಷ್ಟು ಎಂದು ಸ್ಟಾರ್ಟ್‍ಅಪ್‍ಗಳು ಆರಂಭಗೊಳ್ಳುತ್ತಿವೆ.
ಬಹುತೇಕ ಸ್ಟಾರ್ಟ್‍ಅಪ್‍ಗಳು ತಂತ್ರಜ್ಞಾನ ಮತ್ತು ಸೇವಾ ಕ್ಷೇತ್ರದಲ್ಲಿ ಆರಂಭಗೊಳ್ಳುತ್ತಿವೆ. ತಯಾರಿಕಾ ಕ್ಷೇತ್ರದಲ್ಲೂ ಸ್ಟಾರ್ಟ್‍ಅಪ್‍ಗಳು ಆರಂಭಗೊಳ್ಳಬೇಕೆಂಬುದು ಆರ್ಥಿಕ ತಜ್ಞರ ಅಭಿಪ್ರಾಯವಾಗಿದೆ. ಭಾರತದಲ್ಲಿ ಒಂದು ಸ್ಟಾರ್ಟ್‍ಅಪ್ ನೀತಿಯನ್ನು ರೂಪಿಸಬೇಕೆಂಬುದು ಅಸೋಚಾಮ್, ಸಿಐಐ ನಂತಹ ಉದ್ಯಮ ಒಕ್ಕೂಟಗಳು ಸಹ ಹಿಂದಿನಿಂದಲೂ ಒತ್ತಾಯ ಮಾಡುತ್ತಾ ಬಂದಿವೆ. ಈ ಹಿನ್ನೆಲೆಯಲ್ಲಿ ಇತ್ತೀಚೆಗೆ ಹಲವು ರಾಜ್ಯಗಳು ಸಹ ಹೊಸ ಕೈಗಾರಿಕಾ ನೀತಿಗಳನ್ನು ರೂಪಿಸುವ ಸಂದರ್ಭದಲ್ಲಿ ಸ್ಟಾರ್ಟ್‍ಅಪ್‍ಗಳ ಕುರಿತೂ ಹೊಸ ನೀತಿ ರೂಪಿಸುವ ಕುರಿತು ಇಂಗಿತ ವ್ಯಕ್ತಪಡಿಸಿವೆ.