ನವದೆಹಲಿ: ರಾಷ್ಟ್ರೀಯ ನ್ಯಾಯಾಂಗ ನೇಮಕ ಆಯೋಗ(ಎನ್‍ಜೆಎಸಿ) ಕಾಯ್ದೆಯನ್ನು ವಜಾ ಮಾಡಿ ಸುಪ್ರೀಂ ಕೋರ್ಟ್ ನೀಡಿರುವ ತೀರ್ಪಿನ ವಿರುದ್ಧ ಲೋಕ ಸಭೆ ಸದಸ್ಯರು ಪಕ್ಷಭೇದ ಮರೆತು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಅಷ್ಟೇ ಅಲ್ಲ, ಸಂಸತ್‍ನ ವ್ಯಾಪ್ತಿಯನ್ನು ಅತಿಕ್ರಮಿಸಿದ ನ್ಯಾಯಾಂಗಕ್ಕೆ 'ಕಠಿಣ ಸಂದೇಶ' ರವಾನಿಸಬೇಕು ಎಂದೂ ಒತ್ತಾಯಿಸಿದ್ದಾರೆ. ಸೋಮವಾರ ಲೋಕಸಭೆಯಲ್ಲಿ ಸುಪ್ರೀಂ ಕೋರ್ಟ್ ನ್ಯಾಯಾಧೀಶರ(ವೇತನ ಮತ್ತು ಸ್ಥಿತಿಗತಿ) ಸೇವಾ ತಿದ್ದುಪಡಿ ವಿಧೇಯಕ 2015ರ ಬಗೆಗಿನ ಚರ್ಚೆಯ ವೇಳೆ ಸದಸ್ಯರು ಎನ್‍ಜೆಎಸಿ ಕುರಿತು ಚರ್ಚೆ ಶುರುವಿಟ್ಟು ಕೊಂಡರು. ಎನ್‍ಜೆಎಸಿ ಕಾನೂನನ್ನು ಜಾರಿ ಮಾಡಲು ಸರ್ಕಾರ ಹೊಸ ವಿಧೇಯಕ ರೂಪಿಸಲಿ ಎಂದು ಎಐಎಡಿ ಎಂಕೆ ಸದಸ್ಯ ಕೆ ಕಾಮರಾಜ್, ಟಿಡಿಪಿ ಯ ರವೀಂದ್ರ ಬಾಬು, ಬಿಜೆಪಿಯ ಪಿ ಬಿ ಚೌಧರಿ ಆಗ್ರಹಿಸಿದರು.
'ಎನ್‍ಜೆಎಸಿಗೆ ಹೊಸ ವಿಧೇಯಕ ತನ್ನಿ. ನ್ಯಾಯಾಧೀಶರ ನೇಮಕಕ್ಕೆ ಸೂಕ್ತ ವ್ಯವಸ್ಥೆ ನಮ್ಮಲ್ಲಿಲ್ಲ'' ಎಂದು ಕಾಮರಾಜ್ ನುಡಿದರು. ಇದೇ ವೇಳೆ ಮಾತನಾಡಿದ ಬಿಜೆಡಿ ಸದಸ್ಯ ತಥಾಗತಾ ಸತ್ಪತಿ, 'ಎನ್‍ಜೆಎಸಿ ರದ್ದು ಮಾಡುವ ಮೂಲಕ ನ್ಯಾಯಾಲಯ ನಮ್ಮನ್ನು ಆರಿಸಿ ಕಳುಹಿಸಿದ ಜನರಿಗೆ ಕಪಾಳಮೋಕ್ಷ ಮಾಡಿದೆ'' ಎಂದರು.