ನವದೆಹಲಿ: ಪಂಚಾಯಿತಿ ಚುನಾವಣೆಗೆ ಸ್ಪರ್ಧಿಸುವವರಿಗೆ ಕನಿಷ್ಠ ವಿದ್ಯಾರ್ಹತೆ ಸೇರಿದಂತೆ ಕೆಲವೊಂದು ಮಾನದಂಡಗಳನ್ನು ನಿಗದಿ ಪಡಿಸಿ ಹರ್ಯಾಣ ಸರ್ಕಾರ ಜಾರಿಗೆ ತಂದಿದ್ದ ಕಾಯ್ದೆಯನ್ನು ಸುಪ್ರೀಂ ಕೋರ್ಟ್ ಎತ್ತಿ ಹಿಡಿದಿದೆ.
ಹರ್ಯಾಣ ಸರ್ಕಾರ ಜಾರಿಗೆ ತಂದಿದ್ದ ಕಾಯ್ದೆಯನ್ನು ಪ್ರಶ್ನಿಸಿ ಸುಪ್ರೀಂ ಕೋರ್ಟ್ನಲ್ಲಿ ಸಲ್ಲಿಸಲಾಗಿದ್ದ ರಿಟ್ ಅರ್ಜಿಯನ್ನು ನ್ಯಾಯಮೂರ್ತಿ ಜೆ. ಚೆಲಮೇಶ್ವರ್ ಮತ್ತು ಎ.ಎಂ.ಸಪ್ರೆ ಅವರಿದ್ದ ಪೀಠವು ವಜಾಗೊಳಿಸಿದೆ.
ಹರ್ಯಾಣ ಸರ್ಕಾರವು ಪಂಚಾಯತ್ ರಾಜ್ ಕಾಯ್ದೆಗೆ ತಿದ್ದುಪಡಿ ತಂದು ಪಂಚಾಯತ್ ರಾಜ್(ತಿದ್ದುಪಡಿ)ಕಾಯ್ದೆ 2015ನ್ನು ಜಾರಿಗೆ ತಂದಿತ್ತು. ಇದರಲ್ಲಿ ಪಂಚಾಯಿತಿ ಚುನಾವಣೆಗೆ ಸ್ಪರ್ಧಿಸುವವರಿಗೆ ಕನಿಷ್ಠ ವಿದ್ಯಾರ್ಹತೆ ಸೇರಿದಂತೆ ಹಲವು ಮಾನದಂಡಗಳನ್ನು ನಿಗದಿಪಡಿಸಲಾಗಿತ್ತು. ಚುನಾವಣೆಯಲ್ಲಿ ಸ್ಪರ್ಧಿಸುವ ಸಾಮಾನ್ಯ ವರ್ಗದವರಿಗೆ ಮೆಟ್ರಿಕ್ಯುಲೇಷನ್ (10ನೇ ತರಗತಿ) ಮತ್ತು ಮಹಿಳೆಯರು ಹಾಗೂ ಪರಿಶಿಷ್ಠ ಜಾತಿ, ಪಂಗಡಗಳ ಅಭ್ಯರ್ಥಿಗಳಿಗೆ 8ನೇ ತರಗತಿ ಓದಿರಬೇಕು ಎಂದು ತಿದ್ದುಪಡಿ ತರಲಾಗಿತ್ತು. ಈ ಕಾಯ್ದೆಗೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿತ್ತು.
ಇನ್ನು ಅಭ್ಯರ್ಥಿಗಳಿಗೆ ಯಾವುದೇ ಅಪರಾಧ ಹಿನ್ನೆಲೆಯಿರಬಾರದು. ಜೊತೆಗೆ ವಿದ್ಯುತ್ ಬಿಲ್ ಹಾಗೂ ಸಾಲದ ಕಂತುಗಳನ್ನು ಬಾಕಿ ಉಳಿಸಿಕೊಂಡಿರಬಾರದು ಎಂದು ಸುಪ್ರೀಂ ಕೋರ್ಟ್ ತಿಳಿಸಿದೆ.