ಮುಂಬಯಿ: 13 ವರ್ಷಗಳ ನಂತರ ಬಾಂಬೆ ಹೈಕೋರ್ಟ್ ಗುದ್ದೋಡು ಪ್ರಕರಣದ ತೀರ್ಪು ಪ್ರಕಟಗೊಂಡಾಗ ನಟ ಸಲ್ಮಾನ್ ಖಾನ್ ನ್ಯಾಯಾಲಯದೊಳಗೆ ಕುಸಿದು ಬಿದ್ದರು ಎಂಬುದನ್ನು ಸೆರೆಹಿಡಿಯಲು ಕ್ಯಾಮೆರಾಗಳು ಕಾದು ಕುಳಿತಿದ್ದವು. ಈ ಸುದ್ದಿಯನ್ನು ನೋಡಿದ ಮುಂಬಯಿಯ ಮಾಲ್ವಾನಿ ಸ್ಲಂ ಕಾಲೋನಿಯಲ್ಲಿ ಪೈರೋಜ್ ಶೇಕ್ ಎಂಬಾತ ಕುಸಿದು ಬಿದ್ದ. ಆದರೆ ಇದನ್ನು ಸೆರೆ ಹಿಡಿಯಲು ಯಾವುದೇ ಕ್ಯಾಮೆರಾ ಇರಲಿಲ್ಲ.
ಈ ಪೈರೋಜ್ ಶೇಕ್ ಮತ್ತ್ಯಾರು ಅಲ್ಲ, 2002 ರಲ್ಲಿ ನಡೆದ ಸಲ್ಮಾನ್ ಖಾನ್ ಕಾರು ಆ್ಯಕ್ಸಿಡೆಂಟ್ ನಲ್ಲಿ ಮೃತಪಟ್ಟ ನೂರುಲ್ಲಾ ಖಾನ್ ಅವರ ಮಗ. ಬಾಂಬೆ ಹೈಕೋರ್ಟ್ ತೀರ್ಪು ಶೇಕ್ ನ ಹಲವಾರು ಪ್ರಶ್ನೆಗಳಿಗೆ ಉತ್ತರ ನೀಡಲೇ ಇಲ್ಲ. ಪ್ರಕರಣ ನಡೆದು 13 ವರ್ಷಗಳಾಯಿತು, ಪ್ರಕರಣದ ಅಂತಿಮ ತೀರ್ಪು ಕೂಡ ಬಂತು. ಆದರೆ ಇದುವರೆಗೂ ತನ್ನ ತಂದೆಯನ್ನು ಕೊಂದವರು ಯಾರು ಎಂಬ ಪ್ರಶ್ನೆಗೆ ಉತ್ತರ ಸಿಕ್ಕಿಲ್ಲ.
ನೂರುಲ್ಲಾ ಖಾನ್ ಮಗ ಪೈರೋಜ್ ಶೇಕ್ ಸಲ್ಮಾನ್ ಖಾನ್ ದೊಡ್ಡ ಅಭಿಮಾನಿ, ಸಲ್ಮಾನ್ ಖಾನ್ ಅವರನ್ನು ನಿರ್ದೋಷಿ ಎಂದು ಕೋರ್ಟ್ ನೀಡಿರುವ ತೀರ್ಪಿನ ಬಗ್ಗೆ ಯಾವುದೇ ತಕರಾರಿಲ್ಲ. ಕೋರ್ಟ್ ಸಲ್ಮಾನ್ ಖಾನ್ ನಿರ್ದೋಷಿ ಎಂದು ಹೇಳಿದೆ. ಆಗಿದ್ದರೇ ನಿಜವಾಗಿಯೂ ನನ್ನ ತಂದೆಯನ್ನು ಕೊಂದವರ್ಯಾರು ಎಂಬುದು ಪೈರೋಜ್ ಶೇಕ್ ಪ್ರಶ್ನೆಯಾಗಿದೆ.
13 ವರ್ಷಗಳ ನಂತರವೂ ಪೈರೋಜ್ ಶೇಕ್ ನನ್ನು ಈ ಪ್ರಶ್ನೆ ಕಾಡುತ್ತಲೇ ಇದೆ. 25 ವರ್ಷ ವಯಸ್ಸಿನ ಫೈರೋಜ್ ಶೇಕ್ ತನ್ನ ತಂದೆಯ ಮರಣದ ನಂತರ ತನ್ನ ವಿದ್ಯಾಭ್ಯಾಸ ಅರ್ಧಕ್ಕೆ ನಿಲ್ಲಿಸಿ ಕುಟುಂಬ ನಿರ್ವಹಣೆಗಾಗಿ ದುಡಿಯಲು ಆರಂಭಿಸಿದ್ದಾನೆ.