ರಾಳೇಗಣ್‌ಸಿದ್ಧಿ (ಮಹಾರಾಷ್ಟ್ರ): ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರು ತಮ್ಮ ಪ್ರಧಾನ ಕಾರ್ಯದರ್ಶಿಯ ರಾಜೇಂದ್ರ ಕುಮಾರ್ ಅವರ ಹಿನ್ನಲೆ ಪರೀಕ್ಷಿಸಬೇಕಿತ್ತು ಎಂದು ಭ್ರಷ್ಟಾಚಾರ ವಿರೋಧಿ ಹೋರಾಟಗಾರ ಅಣ್ಣಾ ಹಜಾರೆ ಅವರು ಹೇಳಿದ್ದಾರೆ.
ದೆಹಲಿ ಸಿಎಂ ಕಚೇರಿ ಮೇಲಿನ ಸಿಬಿಐ ದಾಳಿಯ ಬಗ್ಗೆ ಮಾಧ್ಯಮಕ್ಕೆ ಪ್ರತಿಕ್ರಿಯಿಸಿರುವ ಅಣ್ಣಾ ಹಜಾರೆ ಅವರು, ಕೇಜ್ರಿವಾಲ್ ಅವರು ಈಗ ಕೇಂದ್ರದ ವಿರುದ್ಧ ಆರೋಪ ಮಾಡುವ ಬದಲು, ಭ್ರಷ್ಟಾಚಾರ ಆರೋಪ ಎದುರಿಸುತ್ತಿರುವ ತಮ್ಮ ಪ್ರಧಾನ ಕಾರ್ಯದರ್ಶಿಯ ಹಿನ್ನಲೆ ಪರೀಕ್ಷಿಸಬೇಕಿತ್ತು ಎಂದಿದ್ದಾರೆ.
ಕೇಜ್ರಿವಾಲ್ ಅವರು ಯಾವತ್ತು ಭ್ರಷ್ಟಾಚಾರದ ವಿರುದ್ಧ ಹೋರಾಡುತ್ತಾರೆ ಮತ್ತು ನಿಮ್ಮ ಸುತ್ತನಮುತ್ತ ಉತ್ತಮ ವ್ಯಕ್ತಿಗಳೇ ಇರುವಂತೆ ನೋಡಿಕೊಳ್ಳಿ ಎಂದು ನಾನು ಯಾವಾಗಲೂ ಹೇಳುತ್ತಿದ್ದೆ ಎಂದು ಹಿರಿಯ ಹೋರಾಟಗಾರ ತಿಳಿಸಿದ್ದಾರೆ.
ಇದೇ ವೇಳೆ ಸಿಬಿಐ ದಾಳಿ ಸಂಬಂಧ ಬಿಜೆಪಿ ವಿರುದ್ಧವೂ ವಾಗ್ದಾಳಿ ನಡೆಸಿದ ಅಣ್ಣಾ ಹಜಾರೆ, ಒಂದೂವರೆ ವರ್ಷಗಳ ಹಿಂದೆಯೇ ರಾಜೇಂದ್ರ ಕುಮಾರ್ ವಿರುದ್ಧ ಕ್ರಮ ತೆಗೆದುಕೊಳ್ಳಬೇಕಿತ್ತು. ಆದರೆ ಈಗ ದಾಳಿ ಮಾಡಿದ್ದು ಏಕೆ? ಬಿಜೆಪಿ ಇಷ್ಟು ದಿನ ಏನು ಮಾಡುತ್ತಿತ್ತು? ಎಂದು ಪ್ರಶ್ನಿಸಿದ್ದಾರೆ.