ನವದೆಹಲಿ: ಜಿಎಸ್‍ಟಿ ಜಾರಿಗಾಗಿ ಶೇ.1ರಷ್ಟು ಹೆಚ್ಚುವರಿ ತೆರಿಗೆಯನ್ನು ಕೈ ಬಿಡಲು ಸಿದ್ಧ ಎಂದು ಕೇಂದ್ರ ಹಣಕಾಸು ಸಚಿವ ಅರುಣ್ ಜೇಟ್ಲಿ ಬುಧವಾರ ಹೇಳಿದ್ದಾರೆ. ಜಿಎಸ್‍ಟಿಯಲ್ಲಿ ಶೇ.1ರಷ್ಟು ಹೆಚ್ಚುವರಿ ಶುಲ್ಕ ವಿಧಿಸುತ್ತಿರುವುದಕ್ಕೆ ಕಾಂಗ್ರೆಸ್ ಪಕ್ಷ ವಿರೋಧ ವ್ಯಕ್ತಪಡಿಸಿದೆ. ಈ ಹಿನ್ನೆಲೆಯಲ್ಲಿ ಜೇಟ್ಲಿ ಹೆಚ್ಚುವರಿ ತೆರಿಗೆಬಿಡಲು ಸಿದ್ಧ ಎಂದಿದ್ದಾರೆ. ಆದರೆ ಜಿಎಸ್‍ಟಿ ದರ ಎಷ್ಟಿರಬೇಕೆಂಬುದನ್ನು ಸಂವಿಧಾನ ತಿದ್ದುಪಡಿ ಮಸೂದೆಯಲ್ಲಿ ಸೇರಿಸಬೇಕೆಂಬುದನ್ನು ಒಪ್ಪುವುದಿಲ್ಲ ಎಂದಿದ್ದಾರೆ. ಜಿಎಸ್‍ಟಿಗೆ ಸಂಬಂಧಿಸಿದಂತೆ ಉದ್ಯಮ ಒಕ್ಕೂಟ-ಗಳು ಆಯೋಜಿಸಿದ್ದ ಸಭೆಯಲ್ಲಿ ಮಾತನಾಡಿದ ಅವರು, ಜಿಎಸ್‍ಟಿ ದರ ಶೇ.18ರಷ್ಟು ಇರಬೇಕು ಮತ್ತು ರಾಜ್ಯಗಳು ಹೆಚ್ಚುವರಿ ಶುಲ್ಕ ವಿಧಿ-ಸಲು ಅಧಿಕಾರ ಹೊಂದಿರಬಾರದು ಎಂಬುದು ಕಾಂಗ್ರೆಸ್ ಪಕ್ಷದ ಒತ್ತಾಯವಾಗಿದೆ. ಆದರೆ ಗುಜರಾತ್, ತಮಿಳುನಾಡಿನಂತಹ ರಾಜ್ಯಗಳು ಕೈಗಾರಿಕೆಗಳನ್ನು ಸ್ಥಾಪಿಸಲು ಹೆಚ್ಚು ಬಂಡವಾಳ ತೊಡಗಿಸಿದ್ದೇವೆ. ಶೇ.1ರಷ್ಟು ಹೆಚ್ಚುವರಿ ತೆರಿಗೆ ವಿಧಿಸುವುದರಿಂದ ಹೂಡಿಕೆ ಮಾಡಿರುವ ಬಂಡವಾಳ ಹಿಂಪಡೆಯಲು ಸಹಕಾರಿಯಾಗಲಿದೆ ಎಂದು ಹೇಳಿವೆ. ಹೀಗಾಗಿ ಮಸೂದೆಯಲ್ಲಿ ಈ ಪ್ರಸ್ತಾವ ಮಾಡಲಾಗಿದೆ ಎಂದಿದ್ದಾರೆ.