ದೇಶ

ಶಾಸಕರಿಂದಲೇ ಅರುಣಾಚಲ ಸಿಎಂ ಪದಚ್ಯುತಿ, ಬಂಡಾಯ ಶಾಸಕ ನೂತನ ಸಿಎಂ

Lingaraj Badiger

ಇಟಾನಗರ: ಅರುಣಾಚಲ ಪ್ರದೇಶದಲ್ಲಿ ನಡೆಯುತ್ತಿರುವ ರಾಜಕೀಯ ಹೈಡ್ರಾಮಾ ಗುರುವಾರ ಹೊಸ ತಿರುವು ಪಡೆದುಕೊಂಡಿದ್ದು, ಬಂಡಾಯ ಕಾಂಗ್ರೆಸ್ ಶಾಸಕರು ತಮ್ಮದೇ ಸರ್ಕಾರದ ಮುಖ್ಯಮಂತ್ರಿ ನಬಂ ಟುಕಿ ಅವರನ್ನು ಪದಚ್ಯುತಿಗೊಳಿಸಿ, ಹೊಸ ಮುಖ್ಯಮಂತ್ರಿಯನ್ನು ಆಯ್ಕೆ ಮಾಡಿರುವ ನಾಟಕೀಯ ಘಟನೆ ನಡೆದಿದೆ.

ಇಂದು ಹೋಟೆಲ್ ವೊಂದರಲ್ಲಿ ಸಭೆ ಸೇರಿದ್ದ ಬಿಜೆಪಿಯ 11 ಮತ್ತು ಕಾಂಗ್ರೆಸ್ ನ 20 ಬಂಡಾಯ ಶಾಸಕರು(ಇಬ್ಬರು ಪಕ್ಷೇತರ) ಮುಖ್ಯಮಂತ್ರಿ ನಬಂ ಟುಕಿ ನೇತೃತ್ವದ ಕಾಂಗ್ರೆಸ್ ಸರ್ಕಾರದ ವಿರುದ್ಧ ಅವಿಶ್ವಾಸ ಗೊತ್ತುವಳಿ ಮಂಡಿಸಿದ್ದಾರೆ. ಅಲ್ಲದೇ ಬಂಡಾಯ ಕಾಂಗ್ರೆಸ್ ಶಾಸಕರು ಮುಖ್ಯಮಂತ್ರಿ ನಬಂ ಟುಕಿಯನ್ನು ಪದಚ್ಯುತಗೊಳಿಸಿ, ಹೊಸ ಮುಖ್ಯಮಂತ್ರಿಯನ್ನು ಆಯ್ಕೆ ಮಾಡಿದ್ದಾರೆ.

ನಿನ್ನೆ ಅರುಣಾಚಲ ವಿಧಾನಸಭೆಯಿಂದ ಅಮಾನತುಗೊಂಡಿದ್ದ 14 ಬಂಡುಕೋರ ಕಾಂಗ್ರೆಸ್ ಶಾಸಕರು ಸೇರಿದಂತೆ 33 ಶಾಸಕರು ಸಮುದಾಯ ಭವನವೊಂದರಲ್ಲಿ ಕಲಾಪ ನಡೆಸಿ, ಅಲ್ಲಿಯೇ ಸ್ಪೀಕರ್ ನಬಾಂ ರೇಬಿಯಾ ಅವರನ್ನು ಪದಚ್ಯುತಗೊಳಿಸುವ ನಿರ್ಧಾರ ಕೈಗೊಂಡಿದ್ದರು.

60 ಸದಸ್ಯ ಬಲದ ಅರುಣಾಚಲ ಪ್ರದೇಶ ವಿಧಾನಸಭೆಯಲ್ಲಿ ಬಂಡಾಯ ಸಾರಿದ 20 ಮಂದಿ ಕಾಂಗ್ರೆಸ್ ಶಾಸಕರು, 11 ಮಂದಿ ಬಿಜೆಪಿ ಹಾಗೂ ಇಬ್ಬರು ಪಕ್ಷೇತರ ಶಾಸಕರು ಒಟ್ಟಾಗಿ ಸೇರಿ ಟುಕಿ ಸರ್ಕಾರದ ವಿರುದ್ಧ ಅವಿಶ್ವಾಸ ಗೊತ್ತುವಳಿ ಮಂಡಿಸಿದ್ದಲ್ಲದೇ, ಬಂಡಾಯ ಕಾಂಗ್ರೆಸ್ ಶಾಸಕ ಕಾಲಿಖೋ ಪುಲ್ ಅವರನ್ನು ಅರುಣಾಚಪ್ರದೇಶದ ನೂತನ ಮುಖ್ಯಮಂತ್ರಿಯನ್ನಾಗಿ ಆಯ್ಕೆ ಮಾಡಿದ್ದಾರೆ.

SCROLL FOR NEXT