ನವದೆಹಲಿ: ``ಇದು ಹಾಡಹಗಲೇ ನಡೆದ ದರೋಡೆ. ಮೊದಲು ಡಿಡಿಸಿಎ ಚಾರ್ಟರ್ಡ್ ಅಕೌಂಟೆಂಟ್ ನನ್ನು ತನಿಖೆ ನಡೆಸಬೇಕು'' ಎಂದು ಬಿಜೆಪಿ ಸಂಸದ ಕೀರ್ತಿ ಆಜಾದ್ ಹೇಳಿದ್ದಾರೆ.
ದಿ ಹಿಂದೂಗೆ ಗುರುವಾರ ನೀಡಿದ ಸಂದರ್ಶನದಲ್ಲಿ ಮಾತನಾಡಿರುವ ಆಜಾದ್, ``ಜೂನಿಯರ್ ಕ್ರಿಕೆಟ್‍ನಲ್ಲಿ ಆಯ್ಕೆ ಆಗಲಿಕ್ಕೆ ರು.2 ರಿಂದ ರು.5 ಲಕ್ಷ ಕೇಳುತ್ತಿದ್ದಾರೆ. ಹೀಗಾಗಿ ನಾವು ನಮ್ಮ ಮಕ್ಕಳನ್ನು ಕ್ರಿಕೆಟ್ ಆಡುವುದನ್ನೇ ಬಿಡುವಂತೆ ಹೇಳುತ್ತಿದ್ದೇವೆ ಎಂದು ಹಲವು ಹೆತ್ತವರು ನನ್ನಲ್ಲಿ ದೂರಿದರು.
ಅವರ ಅಳಲು ಕೇಳಿದ ಬಳಿಕ ನಾನು ಈ ವಿಚಾರದಲ್ಲಿ ಹೋರಾಡಲು ಆರಂಭಿಸಿದೆ. ಸ್ಟೇಡಿಯಂ ಅನ್ನು ನಿರ್ಮಿಸಲು ಹೇಗೆ ನಕಲಿ ಕಂಪನಿಗಳನ್ನು ಸೃಷ್ಟಿಸಲಾಯಿತು ಎಂಬುದು ನನಗೆ ಗೊತ್ತಾಯಿತು. ಶೌಚಾಲಯ ಕಟ್ಟಲು ರು.4 ಕೋಟಿ ತಗುಲಿದೆ ಎನ್ನುತ್ತಾರೆ. ಆದರೆ, ಈ ಹಣವನ್ನು ಯಾವುದೇ ಟೆಂಡರ್ ಕರೆಯದೇ ಲಪಟಾಯಿಸಲಾಗಿದೆ.
ಆಗಲೇ ನಾನು ಜೇಟ್ಲಿ ಅವರೊಂದಿಗೆ ಮಾತನಾಡಿದೆ. ನಾವು(ಬಿಷನ್ ಸಿಂಗ್ ಬೇಡಿ, ಮದನ್ ಲಾಲ್, ಸುರೇಂದರ್ ಖನ್ನಾ, ಮನೀಂದರ್ ಸಿಂಗ್) ಈ ಬಗ್ಗೆ ಜೇಟ್ಲಿಗೆ ಪತ್ರವನ್ನೂ ಬರೆದಿದ್ದೆವು'' ಎಂದೂ ಹೇಳಿದ್ದಾರೆ ಆಜಾದ್. ``ನಕಲಿ ವಿಳಾಸ, ದೂರವಾಣಿ ಸಂಖ್ಯೆಗಳುಳ್ಳ 14 ನಕಲಿ ಕಂಪನಿಗಳನ್ನು ಸೃಷ್ಟಿಸಲಾಗಿತ್ತು.
ಯಾರಿಗೂ ಗೊತ್ತಾಗದಂತೆ ಈ ಕಂಪನಿಗಳಿಗೆ ಹಣ ರವಾನಿಸಲಾಗುತ್ತಿತ್ತು. ಗುತ್ತಿಗೆಗಳನ್ನು ಕಾರ್ಯಕಾರಿ ಸಮಿತಿ ಮೂಲಕ ಪಾಸ್ ಮಾಡುತ್ತಿರಲಿಲ್ಲ. ಡಿಡಿಸಿಎ ಹುಟ್ಟುಹಾಕಿದ ನಕಲಿ ಬಿಲ್‍ಗಳ ಪ್ರತಿಗಳು ನನ್ನಲ್ಲಿವೆ.
ಒಂದು ವೇಳೆ ನಾನು ಸುಳ್ಳು ಹೇಳುತ್ತಿದ್ದರೆ ನನ್ನನ್ನು ಗಲ್ಲಿಗೇರಿಸಿ. ಸತ್ಯ ಹೇಳುತ್ತಿದ್ದರೆ, ತಪ್ಪಿತಸ್ಥರಿಗೆ ಶಿಕ್ಷೆಯಾಗಲಿ. ನಾನು ಹೋರಾಡುತ್ತಿರುವುದು ಕ್ರಿಕೆಟ್‍ನ ಘನತೆ ಕಾಪಾಡುವುದಕ್ಕಾಗಿಯೇ ಹೊರತು ಸ್ವಂತ ಪ್ರತಿಷ್ಠೆಗಾಗಿ ಅಲ್ಲ'' ಎಂದೂ ಹೇಳಿದ್ದಾರೆ ಕೀರ್ತಿ ಆಜಾದ್.