ನವದೆಹಲಿ: ಗೋಮಾಂಸ ಕೈವಶವಿರಿಸಿದ್ದಾರೆ ಎಂದು ಉತ್ತರ ಪ್ರದೇಶದ ದಾದ್ರಿಯಲ್ಲಿ ಮುಸ್ಲಿಂ ವ್ಯಕ್ತಿಯೊಬ್ಬನನ್ನು ಹತ್ಯೆಗೈದ ಪ್ರಕರಣದ ಪ್ರಮುಖ ಆರೋಪಿ ಕೊಲೆಗೆ ಪ್ರೇರೇಪಿಸಿದ್ದು ಏನು ಎಂಬುದನ್ನು ಬಹಿರಂಗ ಪಡಿಸಿದ್ದಾನೆ.
ಗೋಹತ್ಯೆ ಮಾಡಿದ್ದಾರೆ ಎಂಬ ವದಂತಿಯೇ ಈ ಕೊಲೆಗೆ ಕಾರಣವಾಗಿತ್ತು ಎಂದು ಪ್ರಮುಖ ಆರೋಪಿ ಹೇಳಿರುವುದಾಗಿ ಪೊಲೀಸ್ ಆರೋಪ ಪಟ್ಟಿಯಲ್ಲಿ ದಾಖಲಿಸಲಾಗಿದೆ. ಆದರೆ ಎಲ್ಲಿಯೂ ಬೀಫ್ ಎಂಬ ಪದವನ್ನು ಆರೋಪಪಟ್ಟಿಯಲ್ಲಿ ಬಳಸಲಾಗಿಲ್ಲ.
ದಾದ್ರಿಯಲ್ಲಿ 52ರ ಹರೆಯದ ಮೊಹಮ್ಮದ್ ಅಕ್ಲಾಕ್ ಎಂಬ ವ್ಯಕ್ತಿಯನ್ನು ಹತ್ಯೆಗೈದ ಪ್ರಕರಣ ನಡೆದು ಮೂರು ತಿಂಗಳ ನಂತರ ಆರೋಪ ಪಟ್ಟಿ ದಾಖಲಿಸಲಾಗಿದೆ. ಗೋಮಾಂಸ ಕೈವಶವಿರಿಸಿದ್ದಾರೆ ಎಂಬ ಆರೋಪದಲ್ಲಿ ಹಿಂದೂ ಯುವಕರ ಗುಂಪು ಅಕ್ತಾಖ್‌ನ್ನು ಮನೆಯಿಂದ ಹೊರಗೆಳೆದು ತಂದು ಹತ್ಯೆ ಮಾಡಿತ್ತು. ಈ ಘಟನೆಯಲ್ಲಿ ಅಕ್ಸಾಖ್‌ನ ಮಗ ದಾನಿಷ್ ತೀವ್ರ ಗಾಯಗೊಂಡಿದ್ದನು.
ಪ್ರಕರಣದ 15 ಆರೋಪಿಗಳಲ್ಲಿ ಒಬ್ಬನಾದ ಸ್ಥಳೀಯ ಬಿಜೆಪಿ ರಾಜಕಾರಣಿಯ ಮಗ ವಿಶಾಲ್ ರಾಣಾ, ಅಖ್ಲಾಕ್ ಗೋಹತ್ಯೆ ಮಾಡಿದ್ದಾನೆ ಎಂದು ಕೆಲವರು ನನ್ನಲ್ಲಿ ಹೇಳಿದ್ದರು ಎಂದಿದ್ದಾನೆ.
ಹಿಂದೂ ಧರ್ಮದಲ್ಲಿ ಗೋವು ನಮ್ಮ ತಾಯಿಯಂತೆ. ಈ ವಿಷ್ಯಕ್ಕೆ ಕ್ಷುಬ್ದರಾದ ನಾವು ಅಖ್ಲಾಕ್ ಮನೆಗೆ ಹೋಗಿ ದಾಳಿ ಮಾಡಿದೆವು. ಅಖ್ಲಾಕ್‌ನ ಮಗನಿಗೆ ಥಳಿಸಿದೆವು. ಟ್ರಾನ್ಸ್‌ಫಾರ್ಮರ್ ವರೆಗೆ ಅಖ್ಲಾಕ್‌ನ್ನು ಹೊರಗೆಳೆದು ತಂದೆವು. ನನ್ನ ಸಂಬಂಧಿ ಶಿವಂ ಮತ್ತು ಇನ್ನು ಕೆಲವರು (ಮುಖ ನೋಡಿದರೆ ಗುರುತು ಹಿಡಿಯಬಲ್ಲೆ) ನನ್ನನ್ನು ಈ ರೀತಿ ಮಾಡುವಂತೆ ಪ್ರೇರೇಪಿಸಿದರು ಎಂದು ಆರೋಪಪಟ್ಟಿಯಲ್ಲಿ ವಿಶಾಲ್ ಹೇಳಿರುವುದು ದಾಖಲಾಗಿದೆ.
250 ಪುಟಗಳ ಆರೋಪ ಪಟ್ಟಿಯಲ್ಲಿ ವಿಶಾಲ್ ನ ಇಬ್ಬರು ಸಂಬಂಧಿಗಳ ಹೆಸರಿದೆ.