ಶ್ರೀನಗರ: ಕೆಲವು ಪ್ರಚೋದಕ ಗುಂಪು ಭಾರತ-ಪಾಕಿಸ್ತಾನ ದ್ವಿಪಕ್ಷೀಯ ಸಂಬಂಧಕ್ಕೆ ಧಕ್ಕೆ ಉಂಟುಮಾಡುವ ಸಾಧ್ಯತೆ ಇದ್ದು, ಉಭಯ ದೇಶಗಳ ನಾಯಕರು ಈ ಬಗ್ಗೆ ಎಚ್ಚರದಿಂದ ಇರಬೇಕು ಎಂದು ಕಾಶ್ಮೀರ ಪ್ರತ್ಯೇಕತಾವಾದಿಗಳು ಎಚ್ಚರಿಕೆ ನೀಡಿದ್ದಾರೆ.
ಪಾಕಿಸ್ತಾನಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರ ಅನಿರೀಕ್ಷಿತ ಭೇಟಿಯನ್ನು ಸ್ವಾಗತಿಸಿದ್ದ ಹುರಿಯತ್ ಕಾನ್ಫರೆನ್ಸ್ ಸಂಘಟನೆಯ ಮುಖಂಡ ಮಿರ್ವೈಜ್ ಉಮರ್ ಫಾರೂಕ್, ಭಾರತ-ಪಾಕ್ ನಡುವೆ ಇರುವ ಸಮಸ್ಯೆಗಳನ್ನು ಬಗೆಹರಿಸಿಕೊಳ್ಳಲು ಮೋದಿ- ನವಾಜ್ ಷರೀಫ್ ನಾಯಕತ್ವ ಪ್ರಯತ್ನಿಸಲಿದೆ. ಆದರೆ ಸಂಬಂಧ ಉತ್ತಮಗೊಳ್ಳುವುದಕ್ಕೆ ಅಡ್ಡಿಯಾಗಿರುವ ಕೆಲವು ಪ್ರಚೋದಕ ಸಂಘಟನೆಗಳ ಬಗ್ಗೆ ಉಭಯ ನಾಯಕರೂ ಎಚ್ಚರ ವಹಿಸಬೇಕು ಎಂದು ಸಲಹೆ ನೀಡಿದ್ದಾರೆ.
ಭಾರತ-ಪಾಕ್ ನಡುವಿನ ಸೌಹಾರ್ದಯುತ ಸಂಬಂಧ ಮತ್ತಷ್ಟು ಗಟ್ಟಿಗೊಳ್ಳಲಿದೆ ಎಂಬುದಕ್ಕೆ ಪಾಕಿಸ್ತಾನಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರ ಅನಿರೀಕ್ಷಿತ ಭೇಟಿ ಮತ್ತಷ್ಟು ಪುಷ್ಠಿ ನೀಡಿದೆ. ಎರಡು ದೇಶಗಳ ನಾಗರಿಕರಲ್ಲಿ ಮಾತ್ರವಲ್ಲದೇ, ದಕ್ಷಿಣ ಏಷ್ಯಾದ ಭಾಗದಲ್ಲೇ ಹೊಸ ನಿರೀಕ್ಷೆಯೊಂದು ಮೂಡಿದೆ ಎಂದು ಫಾರೂಕ್ ಅಭಿಪ್ರಾಯಪಟ್ಟಿದ್ದಾರೆ.