ನವದೆಹಲಿ: ಇತ್ತೀಚೆಗಷ್ಟೇ ಮಲೇಷ್ಯಾದ ಬಾಲಿಯಲ್ಲಿ ಸೆರೆಯಾಗಿದ್ದ ಭೂಗತಪಾತಕಿ ಛೋಟಾ ರಾಜನ್ ನನ್ನು ಹತ್ಯೆಗೈಯ್ಯಲು ಡಿ-ಕಂಪನಿ ಸ್ಕೆಚ್ ರೂಪಿಸಿದ್ದು, ದೇಶದ ಅತಿ ಭದ್ರತೆಯ ಜೈಲು ಎಂದೇ ಖ್ಯಾತಿ ಗಳಿಸಿರುವ ತಿಹಾರ್ ಜೈಲಿನಲ್ಲಿಯೇ ಆತನನ್ನು ಮುಗಿಸಲು ಶಡ್ಯಂತ್ರ ರಚಿಸಲಾಗಿದೆ ಎಂದು ತಿಳಿದುಬಂದಿದೆ.
ಭಾರತದ ಸೆರೆಯಲ್ಲಿರುವ ಛೋಟಾ ರಾಜನ್ ಕೊಲ್ಲುವುದಕ್ಕೆ ಸಂಚು ರೂಪಿಸಿದ್ದೇವೆ. ಜೈಲಿನಲ್ಲೇ ಆತನನ್ನು ಕೊಲ್ಲುತ್ತೇವೆ ಎಂದು ಭೂಗತ ಪಾತಕಿ ದಾವೂದ್ ಇಬ್ರಾಹಿಂನ ಬಲಗೈ ಬಂಟ ಛೋಟಾ ಶಕೀಲ್ ಗುಡುಗಿದ್ದಾನೆ. ಖಾಸಗಿ ವಾಹಿನಿಗೆ ನೀಡಿದ ಸಂದರ್ಶನದಲ್ಲಿ ಮಾತನಾಡಿರುವ ಶಕೀಲ್, ಇಂಡೋನೇಷ್ಯಾದ ಬಾಲಿಯಲ್ಲಿ ಬಂಧಿತನಾಗಿದ್ದ ವೇಳೆ ಹತ್ಯೆಗೆ ಸಂಚು ರೂಪಿಸಿದ್ದೆವು. ಆದರೆ ಕೂದಲೆಳೆಯ ಅಂತರದಲ್ಲಿ ರಾಜನ್ ಪಾರಾಗಿದ್ದ. ಈ ಹಿಂದೆ ಬ್ಯಾಂಕಾಕ್ ಮತ್ತು ಆಸ್ಟ್ರೇಲಿಯಾದಲ್ಲೂ ಹತ್ಯೆಗೆ ಯತ್ನಿಸಿದ್ದೆವು ಎಂದು ಹಿಂದಿನ ಸಂಚಿನ ಬಗ್ಗೆ ಶಕೀಲ್ ಹೇಳಿಕೊಂಡಿದ್ದಾನೆ.
ಪತ್ರಕರ್ತರ ಸೋಗಿನಲ್ಲಿ ಹತ್ಯೆಗೆ ಸಂಚು!
ರಾಜನ್ ಬಾಲಿಯಲ್ಲಿ ಬಂಧಿತನಾಗಿದ್ದ ವೇಳೆ ಪತ್ರಕರ್ತರ ಸೋಗಿನಲ್ಲಿ ಹತ್ಯೆ ನಡೆಸಲು ಸಂಚು ರೂಪಿಸಿದ್ದನ್ನು ಶಕೀಲ್ ಹೇಳಿಕೊಂಡಿದ್ದಾನೆ. ಓರ್ವ ಪುರುಷ ಹಾಗೂ ಮಹಿಳೆ ಸಂದರ್ಶನದ ನೆಪದಲ್ಲಿ ನಕಲಿ ಐಡಿಕಾರ್ಡ್ ತಯಾರಿಸಿ ಕ್ಯಾಮರಾ ಬಳಸಿ ದಾಳಿ ನಡೆಸಲು ನಿರ್ಧರಿಸಿದ್ದೆವು. ಆದರೆ ಬಂದೂಕು ತೆಗೆದುಕೊಂಡಿರಲಿಲ್ಲ ಎಂದಿದ್ದಾನೆ. ಸದ್ಯ ರಾಜನ್ ತಿಹಾರ್ ಜೈಲಿನಲ್ಲಿದ್ದರೂ ಆತನನ್ನು ಮುಗಿಸದೇ ಬಿಡುವುದಿಲ್ಲ. ಒಂದು ದಿನ ಅವಕಾಶ ಸಿಕ್ಕರೆ ಆತನನ್ನು ಹತೈಗೈಯುವುದು ಖಂಡಿತ, ಅದೇನೂ ಕಷ್ಟದ ವಿಷಯವಲ್ಲ ಎಂದು ಶಕೀಲ್ ಹೇಳಿಕೊಂಡಿದ್ದಾನೆ.
ಭಾಯ್ ಗೆ ಸಮನಾರಿಲ್ಲ: ಅವರಿಗೆ ನಿವೃತ್ತಿ ಇಲ್ಲ
ದಾವೂದ್ ಇತ್ತೀಚೆಗಷ್ಟೇ 60ನೇ ವರ್ಷದ ಜನ್ಮ ದಿನಾಚರಣೆ ಮಾಡಿಕೊಂಡ ಹಿನ್ನಲೆಯಲ್ಲಿ ಕೇಳಿದ ಪ್ರಶ್ನೆಗೆ ಉತ್ತರಿಸಿದ ಶಕೀಲ್, ದಾವೂದ್ ಭಾಯ್ ಮುಂದಿನ ದಿನಗಳಲ್ಲೂ ಎಲ್ಲರನ್ನೂ ಮುನ್ನಡೆಸಲಿದ್ದಾರೆ. ಆ ಸ್ಥಾನಕ್ಕೆ ಬೇರೆಯವರನ್ನು ನೇಮಿಸಿಲ್ಲ. 60ನೇ ವರ್ಷಕ್ಕೆ ಕಾಲಿಟ್ಟ ತಕ್ಷಣ ಹಿಂದೆ ಸರಿಯುತ್ತಾರೆ ಎಂದರ್ಥವಲ್ಲ. ಅಣ್ಣನ ಸ್ಥಾನಕ್ಕೆ ಮತ್ತೊಬ್ಬರು ಸಮಾನರಿಲ್ಲ ಎಂದು ತಿಳಿಸಿದ್ದಾನೆ.